ADVERTISEMENT

ಶನಿವಾರವೂ ಜಿಟಿ ಜಿಟಿ ಮಳೆ

4.4 ಮಿಮೀ ಮಳೆ * ವಾಹನ ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:52 IST
Last Updated 20 ಜುಲೈ 2013, 19:52 IST

ಬೆಂಗಳೂರು: ನಗರದಲ್ಲಿ ಶನಿವಾರವೂ ಜಿಟಿ ಜಿಟಿ ಮಳೆ ಸುರಿಯಿತು. ಚಳಿಯ ವಾತಾವರಣವೂ ಕೂಡ ಹೆಚ್ಚಿತ್ತು. ಎಡಬಿಡದೇ ಸುರಿದಿದ್ದರಿಂದ ಹದಗೆಟ್ಟ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ಒಂದೆಡೆ ಪ್ರಯಾಣಿಕರು ಪರದಾಡುವಂತಾದರೆ, ಮತ್ತೊಂದೆಡೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನ ತೀವ್ರ ತೊಂದರೆ ಅನುಭವಿಸಿದರು. ನಗರದಲ್ಲಿ ಗರಿಷ್ಠ  4.4 ಮಿ.ಮೀ. ಮಳೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ 10.8 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಗರದ ವಿವಿಧ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತುಸು ತೊಂದೆಯಾಯಿತು.

ಕಬ್ಬನ್ ಉದ್ಯಾನ ರಸ್ತೆ, ಬಸವೇಶ್ವರ ವೃತ್ತ, ಟ್ರಿನಿಟಿ ವೃತ್ತ, ಫ್ರೇಜರ್ ಟೌನ್, ಮೈಸೂರು ರಸ್ತೆ, ನಾಯಂಡಹಳ್ಳಿ ಜಂಕ್ಷನ್, ಕೋರಮಂಗಲ, ಬನಶಂಕರಿ  ಸೇರಿದಂತೆ ಹಲವೆಡೆ ಮಳೆ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು.

ಇದರಿಂದ ಕೆಲ ಕಾಲ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.  ಆನಂತರ ಪಾಲಿಕೆ ಮತ್ತು ಜಲಮಂಡಳಿಯ ಎಂಜಿನಿಯರ್‌ಗಳು ಕಾರ್ಯಾಚರಣೆ ನಡೆಸಿ ಸಂಚಾರ ಸುಗಮಗೊಳಿಸಿದರು ಎಂದು ಪಾಲಿಕೆಯ ನಿಯಂತ್ರಣಾ ಕಚೇರಿಯ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.