ADVERTISEMENT

ಶಬ್ದ ಮಾಲಿನ್ಯ ತಡೆಗೆ ಹೈಕೋರ್ಟ್ ಸೂತ್ರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:38 IST
Last Updated 4 ಡಿಸೆಂಬರ್ 2012, 19:38 IST

ಬೆಂಗಳೂರು: ಶಬ್ದ ಮಾಲಿನ್ಯದಿಂದ ಪಡಿಪಾಟಲು ಅನುಭವಿಸುತ್ತಿರುವ ಬೆಂಗಳೂರಿನ ಜನತೆಯ ನೆರವಿಗೆ ಧಾವಿಸಿರುವ ಹೈಕೋರ್ಟ್, ನಗರದ ಕಟ್ಟಡ ನಿರ್ಮಾಣ ಸಂಸ್ಥೆಗಳು ಬೆಳಿಗ್ಗೆ 6ರಿಂದ 8 ಗಂಟೆಯ ನಡುವೆ ಹಾಗೂ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯ ನಡುವಿನ ಅವಧಿಯಲ್ಲಿ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳ ಕುರಿತು ಮಂಗಳವಾರ ಕೆಲವು ನಿರ್ದೇಶನಗಳನ್ನು ನೀಡಿದೆ.

ಬಿ.ಆರ್. ಉಡುಪ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ, `ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಸಂಘಗಳ ಒಕ್ಕೂಟದ (ಕ್ರೆಡೈ) ಎಲ್ಲ ಸದಸ್ಯರಿಗೆ ಈ ನಿರ್ದೇಶನ (ಪಟ್ಟಿ ನೋಡಿ) ಅನ್ವಯವಾಗಲಿದೆ' ಎಂದು ಸ್ಪಷ್ಟಪಡಿಸಿದೆ.

ಯಾವ ಸಮಯದಲ್ಲಿ ಯಾವ ಕಾಮಗಾರಿ ನಡೆಸಬಹುದು ಎಂಬುದಕ್ಕೆ ಸಂಬಂಧಿಸಿಂತೆ ಇದೇ ಪ್ರಕರಣದ ವಿಚಾರಣೆ ವೇಳೆ, ಸೆಪ್ಟೆಂಬರ್ 6ರಂದು ನೀಡಿದ್ದ ಆದೇಶದ ಬದಲು ಮಂಗಳವಾರ ನೀಡಿರುವ ಆದೇಶ  ಚಾಲ್ತಿಯಲ್ಲಿರುತ್ತದೆ. ಈ ಆದೇಶದ ಪಾಲನೆ ಕುರಿತು ಮಾರ್ಚ್ 31ರ ನಂತರ ನ್ಯಾಯಪೀಠ ಪರಿಶೀಲನೆ ನಡೆಸಬಹುದು. ಅಗತ್ಯ ಕಂಡುಬಂದರೆ ಸೂಕ್ತ ಬದಲಾವಣೆಗಳನ್ನೂ ತರಬಹುದು. ನಿರ್ದೇಶನಗಳ ಉಲ್ಲಂಘನೆಯನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದೂ ನ್ಯಾಯಪೀಠ ಎಚ್ಚರಿಕೆ ನೀಡಿದೆ.

ವಿಚಾರಣೆಯ ವೇಳೆ ಕ್ರೆಡೈ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿ, ಶಬ್ದ ಮಾಲಿನ್ಯದ ಪ್ರಮಾಣವನ್ನು ತಗ್ಗಿಸಲು ಸಂಘ ಕೆಲವು ಸ್ವಯಂ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲು ಉದ್ದೇಶಿಸಿದೆ ಎಂದು ತಿಳಿಸಿದರು. ಸೆ. 9ರಂದು ನೀಡಿದ್ದ ಆದೇಶದಲ್ಲಿ ಬದಲಾವಣೆ ತರಬೇಕು ಎಂದು ಕೋರಿದರು. ಯಾವ ಸಮಯದಲ್ಲಿ ಯಾವ ಕಾಮಗಾರಿ ಕೈಗೆತ್ತಿಕೊಳ್ಳಬಹುದು ಎಂಬ ವಿವರಗಳನ್ನೂ ಕ್ರೆಡೈ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ಅದನ್ನು ಪಾಲಿಸುವಂತೆ ಆದೇಶಿಸಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎಸ್.ವಾಸುದೇವ ಅವರು, ಸೆ. 9ರಂದು ನೀಡಿದ ಆದೇಶವನ್ನೇ ಅಂತಿಮಗೊಳಿಸಬೇಕು. ಅದರಲ್ಲಿ ಯಾವುದೇ ಬದಲಾವಣೆ ತರಬಾರದು ಎಂದು ಮನವಿ ಮಾಡಿದ್ದರು. `ಬೆಳಿಗ್ಗೆ 8 ಗಂಟೆಯ ಮುನ್ನ ಹಾಗೂ ಸಂಜೆ 6 ಗಂಟೆಯ ನಂತರ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಕಾಮಗಾರಿ ನಡೆಸುವಂತಿಲ್ಲ' ಎಂದು ಸೆ. 9ರಂದು ಹೈಕೋರ್ಟ್ ಆದೇಶ ನೀಡಿತ್ತು. ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.