ADVERTISEMENT

ಶಸ್ತ್ರಚಿಕಿತ್ಸೆ ಇಲ್ಲದೆ ಬೆನ್ನುಹುರಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 18:50 IST
Last Updated 20 ಫೆಬ್ರುವರಿ 2011, 18:50 IST

ಬೆಂಗಳೂರು: ತೀವ್ರ ಬೆನ್ನು ಹುರಿ ಸಮಸ್ಯೆಗೆ (ಡಿಸ್ಕ್ ಪ್ರೊಲ್ಯಾಬ್) ಶಸ್ತ್ರಚಿಕಿತ್ಸೆ ಇಲ್ಲದೆ ಕೆಲವೇ ಗಂಟೆಗಳಲ್ಲಿ ಚಿಕಿತ್ಸೆ ನೀಡುವ ‘ಡಿಸ್ಕ್ ನ್ಯೂಕ್ಲೋಪ್ಲಾಸ್ಟಿ’ ವಿಧಾನವನ್ನು ನಗರದ ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆಯ ವೈದ್ಯರು ಬಳಸಿ ಯಶಸ್ವಿಯಾಗಿದ್ದಾರೆ. ಈವರೆಗೆ ಸುಮಾರು 30 ಮಂದಿಗೆ ಈ ಚಿಕಿತ್ಸೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್.ಕೆ.ವೆಂಕಟರಮಣ, ‘ಇತ್ತೀಚಿನ ವರ್ಷಗಳಲ್ಲಿ ಬೆನ್ನು ಹುರಿ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ.ಹಾಗಾಗಿ ಡಿಸ್ಕ್ ಪ್ರೊಲ್ಯಾಬ್ ಸಮಸ್ಯೆಯನ್ನು ನೂತನ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆಯಿಲ್ಲದೇ ಗುಣಪಡಿಸಬಹುದಾಗಿದೆ’ ಎಂದರು.

‘ಡಿಸ್ಕ್ ಪ್ರೊಲ್ಯಾಬ್ ತೊಂದರೆಯಿದ್ದರೆ ಸೊಂಟ ಮತ್ತು ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ನೋವು, ಜೋಮು ಹಿಡಿಯುವುದು, ದೌರ್ಬಲ್ಯ ಕಾಣಿಸಿಕೊಳ್ಳುವುದು, ನಡಿಗೆ ಹಾಗೂ ಇತರೆ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ಶೇ 5ರಿಂದ 10ರಷ್ಟು ಮಂದಿ ಸ್ಲಿಪ್ಡ್ ಡಿಸ್ಕ್ ತೊಂದರೆಯಿಂದ ಬಳಲುತ್ತಾರೆ ಎಂದು ಅಂದಾಜಿಸಲಾಗಿದೆ’ ಎಂದು ಹೇಳಿದರು.

‘ಈ ತಂತ್ರಜ್ಞಾನದಲ್ಲಿ ಬೆನ್ನು ಹುರಿಯ ಮಧ್ಯಭಾಗಕ್ಕೆ ಸ್ಪೈನಲ್ ವ್ಯಾಂಡ್ ಇಳಿಸಿ ರೇಡಿಯೋ ವಿಕಿರಣಗಳನ್ನು ಹರಿಸಲಾಗುತ್ತದೆ. ಇದರಿಂದ ಬೆನ್ನು ಹುರಿಯ ಒಳ ಭಾಗ ಸಂಕುಚಿತಗೊಂಡು ಕೊಂಡಿಗಳು ಉತ್ತಮವಾಗಿ ಸ್ವಸ್ಥಾನದಲ್ಲಿ ಜೋಡಣೆಯಾಗುತ್ತವೆ. ಇದರಲ್ಲಿ ಹೆಚ್ಚು ನೋವು ಇರುವುದಿಲ್ಲ. ಕೆಲವೇ ಗಂಟೆಗಳಲ್ಲಿ ಚಿಕಿತ್ಸೆ ನೀಡಬಹುದಾಗಿದೆ.ಈವರೆಗೆ 30 ಮಂದಿಗೆ ನೂತನ ವಿಧಾನದಡಿ ಚಿಕಿತ್ಸೆ ನೀಡಲಾಗಿದೆ. ಈ ಚಿಕಿತ್ಸೆಗೆ 40,000 ರೂಪಾಯಿ ವೆಚ್ಚವಾಗಲಿದೆ’ ಎಂದು ವಿವರಿಸಿದರು.

ಆಸ್ಪತ್ರೆಯ ಸಲಹೆಗಾರ ಡಾ. ಅರುಣ್ ಎಲ್.ನಾಯಕ್, ಜರ್ಮನಿಯ ತಜ್ಞ ಪ್ರೊ.ಅಶಿಮ್ ಲೂಥ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.