ADVERTISEMENT

ಶಾಂತಕುಮಾರಿ-ಸತ್ಯನಾರಾಯಣ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

ಬೆಂಗಳೂರು:  ರಾಜ್ಯ ಚುನಾವಣಾ ಆಯೋಗ ಹಸಿರು ನಿಶಾನೆ ತೋರಿದ್ದರಿಂದ ಬಿಬಿಎಂಪಿ ಹೊಸ ಮೇಯರ್ ಆಯ್ಕೆ ಏ. 27ರಂದು ಮಧ್ಯಾಹ್ನ 2ಕ್ಕೆ ನಡೆಯಲಿದೆ. ವಿಧಾನಸಭಾ ಚುನಾವಣೆಯಲ್ಲಿ ತೊಡಗಿಕೊಂಡಿದ್ದ ಮೇಯರ್ ಹುದ್ದೆ ಆಕಾಂಕ್ಷಿಗಳು ಮತ್ತೆ ಬಿಬಿಎಂಪಿ ಕಡೆಗೆ ತಿರುಗಿ ನೋಡುವಂತಾಗಿದೆ.

ಪೂರ್ವನಿಗದಿಯಂತೆ ಮೇಯರ್ ಚುನಾವಣೆ ಏಪ್ರಿಲ್ ಕೊನೆಯ ವಾರದಲ್ಲಿ ನಡೆಯಬೇಕಿತ್ತು. ಆದರೆ, ವಿಧಾನಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಬಿಬಿಎಂಪಿ ಆಯುಕ್ತರು, `ಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಲು ಏನಾದರೂ ತೊಡಕಿದೆಯೇ' ಎಂದು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ್ದರು.

ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ವಿಧಾನಸಭಾ ಚುನಾವಣೆಗೂ ಮೇಯರ್ ಆಯ್ಕೆಗೂ ಯಾವುದೇ ಸಂಬಂಧ ಇಲ್ಲ. ನಿಗದಿಯಂತೆ ಆಯ್ಕೆ ಪ್ರಕ್ರಿಯೆ ನಡೆಸಬಹುದು ಎಂದು ಸ್ಪಷ್ಟನೆ ನೀಡಿದ್ದರು. ಆದೇಶದ ಪ್ರತಿ ಕೈಗೆ ಸಿಗುತ್ತಿದ್ದಂತೆಯೇ ಬಿಬಿಎಂಪಿ ಆಯುಕ್ತರು ಅದನ್ನು ಪ್ರಾದೇಶಿಕ ಆಯುಕ್ತ ಕೆ.ಶಿವರಾಂ ಅವರಿಗೆ ಕಳುಹಿಸಿಕೊಟ್ಟರು. ಮಧ್ಯಾಹ್ನದ ಹೊತ್ತಿಗೆ ಮೇಯರ್ ಆಯ್ಕೆಗೆ ವೇಳಾಪಟ್ಟಿ ನಿಗದಿಮಾಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದರು.

`ಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಲು ಆಯೋಗ ಅನುಮತಿ ನೀಡಿದೆ. ಶುಕ್ರವಾರವೇ ಬಿಬಿಎಂಪಿ ಸದಸ್ಯರಿಗೆ ನೋಟಿಸ್ ಕಳುಹಿಸಲಾಗಿದೆ' ಎಂದು ಆಯುಕ್ತ ಸಿದ್ದಯ್ಯ ತಿಳಿಸಿದರು.

ಗರಿಗೆದರಿದ ಚಟುವಟಿಕೆ: ವಿಧಾನಸಭಾ ಚುನಾವಣೆಯಲ್ಲಿ ಮಗ್ನರಾಗಿದ್ದ ಬಿಬಿಎಂಪಿ ಸದಸ್ಯರೆಲ್ಲ ಈಗ ಮೇಯರ್ ಚುನಾವಣೆ ಕುರಿತು ತಲೆ ಕೆಡಿಸಿಕೊಳ್ಳಲು ಆರಂಭಿಸಿದ್ದಾರೆ. ಶುಕ್ರವಾರ ಸಂಜೆಯೇ ಬಿಜೆಪಿ ಕಚೇರಿಯಲ್ಲಿ ಮೇಯರ್ ಆಯ್ಕೆ ಕುರಿತಂತೆ ಅನೌಪಚಾರಿಕ ಸಭೆ ನಡೆದಿದೆ. ಆರ್.ಅಶೋಕ ಸೇರಿದಂತೆ ಪಕ್ಷದ ಮುಖಂಡರೆಲ್ಲ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆಕಾಂಕ್ಷಿಗಳೆಲ್ಲ ಮುಖಂಡರ ದುಂಬಾಲು ಬಿದ್ದಿದ್ದಾರೆ.

ಮೇಯರ್ ಇಲ್ಲವೆ ಉಪಮೇಯರ್ ಹುದ್ದೆಗಳಲ್ಲಿ ಒಂದನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಬೇಕು ಎಂದು ಶುಕ್ರವಾರವಷ್ಟೇ ಹೈಕೋರ್ಟ್ ಆದೇಶ ಹೊರಡಿಸಿದೆ. ಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಉಳಿಸಿಕೊಂಡು ಉಪಮೇಯರ್ ಹುದ್ದೆಯನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೂಡಲಪಾಳ್ಯ ಬಿಬಿಎಂಪಿ ಸದಸ್ಯೆ ಎನ್.ಶಾಂತಕುಮಾರಿ ಮತ್ತು ಬಸವನಗುಡಿ ಸದಸ್ಯ ಬಿ.ಎಸ್. ಸತ್ಯನಾರಾಯಣ ಮೇಯರ್ ಹುದ್ದೆಗೆ ಪ್ರಮುಖ ಆಕಾಂಕ್ಷಿಗಳಾಗಿದ್ದು, ಶಾಂತಕುಮಾರಿ ಅವರನ್ನೇ ಪಕ್ಷದ ಹಿರಿಯರು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವಿ.ಸೋಮಣ್ಣ ಸಹ ಶಾಂತಕುಮಾರಿ ಅವರನ್ನು ಬೆಂಬಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸತ್ಯನಾರಾಯಣ ಸಹ ಆ ಹುದ್ದೆ ಅಲಂಕರಿಸಲು ಪ್ರಬಲ ಪೈಪೋಟಿ ನಡೆಸಿದ್ದು, ಅವರಿಗೆ ಪ್ರಭಾವಿ ಮುಖಂಡರೊಬ್ಬರ ಬೆಂಬಲ ಇದೆ ಎನ್ನಲಾಗಿದೆ. ಆದರೆ, ಈ ಸಲ ಮಹಿಳೆಗೆ ಆ ಸ್ಥಾನವನ್ನು ಮೀಸಲಿಡಬೇಕು ಎಂಬ ಒತ್ತಡ ಪಕ್ಷದಲ್ಲಿ ಹೆಚ್ಚುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.