ADVERTISEMENT

ಶಾಸಕರ ಬಾಮೈದನ ಸೋಗಿನಲ್ಲಿ ಚಾಲಕನಿಗೆ ಹೊಡೆದಿದ್ದ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:37 IST
Last Updated 22 ಮಾರ್ಚ್ 2018, 20:37 IST

ಬೆಂಗಳೂರು: ಹಾರ್ನ್ ಮಾಡಿದರೂ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ, ತಾನು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ಬಾಮೈದ ಎಂದು ಹೇಳಿ ಹೋಗಿದ್ದ ಮಿಥುನ್‌ ರೆಡ್ಡಿ (28) ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್ ನಿವಾಸಿಯಾದ ಮಿಥುನ್, ಕೋರಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ. ಬುಧವಾರ ರಾತ್ರಿ 11.30ರ ಸುಮಾರಿಗೆ ಆತ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಮರಳುತ್ತಿದ್ದ. ಇದೇ ವೇಳೆ ಕ್ಯಾಬ್ ಚಾಲಕ ತಿಪ್ಪೇಸ್ವಾಮಿ ಅವರು ಮಾರತ್ತಹಳ್ಳಿ ಕಡೆಗೆ ಹೋಗುತ್ತಿದ್ದರು.

ಸರ್ಜಾಪುರ ರಸ್ತೆಯ ಕೃಪಾನಿಧಿ ಕಾಲೇಜು ಬಳಿ ಕ್ಯಾಬ್ ಹಿಂದಿಕ್ಕಲು ಯತ್ನಿಸಿದ ಮಿಥುನ್, ದಾರಿ ಬಿಡುವಂತೆ ಹಲವು ಬಾರಿ ಹಾರ್ನ್ ಮಾಡಿದ್ದಾನೆ. ದಾರಿ ಬಿಡದ ತಿಪ್ಪೇಸ್ವಾಮಿ, ವಾಹನದ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಮಿಥುನ್‌ಗೆ ಕ್ಯಾಬ್ ಚಾಲಕನ ವರ್ತನೆ ಕೋಪ ತರಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಸ್ವಲ್ಪ ದೂರದಲ್ಲೇ ಕ್ಯಾಬ್ ಹಿಂದಿಕ್ಕಿರುವ ಆತ, ವಾಹನ ಅಡ್ಡಗಟ್ಟಿ ತಿಪ್ಪೇಸ್ವಾಮಿ ಜತೆ ಜಗಳ ಶುರು ಮಾಡಿದ್ದಾನೆ. ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊನೆಗೆ ಮುಷ್ಠಿಯಿಂದ ಮುಖಕ್ಕೆ ಗುದ್ದಿದ್ದಾನೆ. ಅದೇ ಸಮಯಕ್ಕೆ ಇತರೆ ಕ್ಯಾಬ್‌ ಚಾಲಕರು ತಿಪ್ಪೇಸ್ವಾಮಿ ಬೆಂಬಲಕ್ಕೆ ಬಂದಿದ್ದಾರೆ.

ಅವರನ್ನು ನೋಡಿ ಭಯಗೊಂಡ ಆರೋಪಿ, ‘ನಾನು ಶಾಸಕ ಸತೀಶ್‌ರೆಡ್ಡಿ ಅವರ ಬಾಮೈದ. ನನ್ನ ಮೈ ಮುಟ್ಟಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಹೇಳಿ ಕಾರಿನಲ್ಲಿ ಹೊರಟು ಹೋಗಿದ್ದ. ಆ ನಂತರ ಚಾಲಕರು ಕೋರಮಂಗಲ ಠಾಣೆಗೆ ತೆರಳಿ ದೂರು ಕೊಟ್ಟಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರು, ಮೊದಲು ಶಾಸಕರಿಗೆ ಕರೆ ಮಾಡಿ ವಿಚಾರಿಸಿದ್ದರು. ಆಗ ಅವರು, ‘ಯಾರೋ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದಿದ್ದರು. ಚಾಲಕರು ಕೊಟ್ಟಿದ್ದ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಗುರುವಾರ ಮಧ್ಯಾಹ್ನ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಆತ ಕೂಡ, ‘ನನಗೂ ಸತೀಶ್‌ರೆಡ್ಡಿಗೂ ಯಾವುದೇ ಸಂಬಂಧವಿಲ್ಲ. ಚಾಲಕರು ಹಲ್ಲೆ ನಡೆಸಬಹುದೆಂಬ ಭಯದಲ್ಲಿ ಅವರ ಹೆಸರನ್ನು ಹೇಳಿ ಹೋಗಿದ್ದೆ’ ಎಂದಿದ್ದಾನೆ.

ಸುದ್ದಿ ವೈರಲ್: ‘ಶಾಸಕರ ಬಾಮೈದ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ, ಕುಡಿದ ಅಮಲಿನಲ್ಲಿ ದಾಂದಲೆ ನಡೆಸಿದ್ದಾನೆ’ ಎಂದು ಚಾಲಕರು ರಾತ್ರಿಯೇ ಫೇಸ್‌ಬುಕ್‌ನಲ್ಲಿ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದರು. ಅದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಆಗ ಸೆಲ್ಫಿ ವಿಡಿಯೊ ಪೋಸ್ಟ್ ಮಾಡಿದ ಶಾಸಕ ಸತೀಶ್ ರೆಡ್ಡಿ, ‘ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾರೋ ನನ್ನ ಹೆಸರಿಗೆ ಕಳಂಕ ತರಲು ಹೀಗೆ ಮಾಡಿದ್ದಾರೆ. ಪೊಲೀಸರು ಯಾರ ಪ್ರಭಾವಕ್ಕೂ ಒಳಗಾಗದೆ, ಆರೋಪಿಯನ್ನು ಆದಷ್ಟು ಬೇಗ ಬಂಧಿಸಲಿ. ನನಗೆ ಯಾವ ಬಾಮೈದನೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಸಂಜೆ ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಅವರ ಕಚೇರಿಗೆ ತೆರಳಿದ್ದ ಸತೀಶ್‌ ರೆಡ್ಡಿ, ‘ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಮಿಥುನ್ ರೆಡ್ಡಿ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಪ್ರತ್ಯೇಕ ದೂರು ಕೊಟ್ಟು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.