ADVERTISEMENT

ಶಿಫಾರಸು ಅನುಷ್ಠಾನಕ್ಕೆ ಆರು ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:40 IST
Last Updated 8 ಫೆಬ್ರುವರಿ 2012, 19:40 IST

ಬೆಂಗಳೂರು: ನಗರದ ರಸ್ತೆಗಳ ದುರಸ್ತಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ಮಾಡಿರುವ ಶಿಫಾರಸುಗಳ ಅನುಷ್ಠಾನಕ್ಕೆ ಬಿಬಿಎಂಪಿಗೆ ಆರು ತಿಂಗಳ ಗಡುವು ನೀಡಿ ಹೈಕೋರ್ಟ್ ಬುಧವಾರ ಆದೇಶಿಸಿದೆ.
ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ಕುರಿತು ಹಿರಿಯ ವಕೀಲ ಕೆ.ಎನ್.ಸುಬ್ಬಾರೆಡ್ಡಿ ಅವರು 2006ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

ರಸ್ತೆಗಳ ಸುಧಾರಣೆಗೆ ಸಂಬಂಧಿಸಿದಂತೆ ಅದೇ ಸಾಲಿನಲ್ಲಿ ಕೋರ್ಟ್ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ಒಟ್ಟು 112 ಶಿಫಾರಸುಗಳನ್ನು ಮಾಡಿದೆ. ಈ ಪೈಕಿ ಕೆಲವು ಶಿಫಾರಸುಗಳು ಇದುವರೆಗೆ ಜಾರಿಯಾಗದೇ ಇರುವ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿತು. ಈ ಹಿನ್ನೆಲೆಯಲ್ಲಿ ಆರು ತಿಂಗಳ ಗಡುವು ನೀಡಿ ಆದೇಶಿಸಲಾಗಿದೆ.

ಪಾಲಿಕೆಯ ಎಂಜಿನಿಯರಿಂಗ್ ವಿಭಾಗವನ್ನು ಇನ್ನೂ ಬಲಗೊಳಿಸುವುದು, ಪರಿಸರದ ಅಧ್ಯಯನ ನಡೆಸುವ ಸಂಬಂಧ `ಪರಿಸರ ಘಟಕ~ ಸ್ಥಾಪನೆ ಮಾಡುವುದು, ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮೇಲಿಂದ ಮೇಲೆ ಪರಿಶೀಲನೆ ನಡೆಸಲು ಸಮಿತಿ ಸ್ಥಾಪಿಸುವುದು, ರಸ್ತೆ ನಿರ್ಮಾಣಕ್ಕೆ ಮಂಜೂರು ಆಗುವ ಹಣಕ್ಕೆ ಸಂಬಂಧಿಸಿದಂತೆ ಪಾಲಿಕೆಯಲ್ಲಿ ಹಣಕಾಸಿನ ಅವ್ಯವಹಾರ ನಡೆಯದಂತೆ ಅದರ ತಡೆಗೆ ಕ್ರಮ ತೆಗೆದುಕೊಳ್ಳುವುದು, `ಬೈಲಾ~ ಉಲ್ಲಂಘನೆ ಮಾಡಿ ರಸ್ತೆಯ ಜಾಗದ ಮೇಲೆಲ್ಲ ಕಟ್ಟಡ ನಿರ್ಮಾಣ ಆಗುತ್ತಿರುವ ಕುರಿತು ಪರಿಶೀಲನೆ ನಡೆಸುವುದು ಸೇರಿದಂತೆ ಬಾಕಿ ಉಳಿಸಿಕೊಂಡಿರುವ ಇತರ ಶಿಫಾರಸುಗಳ ಅನುಷ್ಠಾನವನ್ನು ಈ ಅವಧಿಯೊಳಗೆ ಪಾಲಿಕೆ ಮಾಡಬೇಕಿದೆ.

ಸ್ಥಳ ಪರಿಶೀಲನೆಗೆ ಆದೇಶ

ವಸಂತನಗರದ ಬಳಿ ಅಂಚೆ ಕಚೇರಿ ಸ್ಥಾಪನೆ ಮಾಡುವ ಸಂಬಂಧದ ಸಾಧ್ಯಾಸಾಧ್ಯತೆ ಕುರಿತಾಗಿ ತಿಳಿಯಲು, ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಹೈಕೋರ್ಟ್ ಬುಧವಾರ ಸರ್ಕಾರಿ ವಕೀಲರಿಗೆ ಆದೇಶಿಸಿದೆ.
ಇಲ್ಲಿ ಇದ್ದ ಅಂಚೆ ಕಚೇರಿಯನ್ನು ಪ್ರಧಾನ ಅಂಚೆ ಕಚೇರಿಗೆ ಸೇರ್ಪಡೆ ಮಾಡಿರುವ ಕ್ರಮ ಪ್ರಶ್ನಿಸಿ ಸತಿಂದರ್‌ಪಾಲ್ ಚೋಪ್ರಾ ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಸರ್ಕಾರಿ ವಕೀಲ ಬಸವರಾಜ ಕರಡ್ಡಿ ಸ್ಥಳ ಪರಿಶೀಲನೆ ನಡೆಸಿ 15 ದಿನಗಳ ಒಳಗೆ ವರದಿ ನೀಡುವಂತೆ ಪೀಠ ನಿರ್ದೇಶಿಸಿದೆ. ಮುಂದಿನ ವಿಚಾರಣೆ ವೇಳೆ ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ಅವರು ಖುದ್ದು ಹಾಜರು ಇದ್ದು, ವಿಷಯದ ಕುರಿತು ಮಾಹಿತಿ ನೀಡುವಂತೆ ಪೀಠ ಆದೇಶಿಸಿದೆ.

ಹೈಕೋರ್ಟ್‌ಗೆ ಶಾಸಕ ವಿಶ್ವನಾಥ್ ಮೊರೆ
ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಒಳಗಾಗಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಅವರ ಪತ್ನಿ ವಾಣಿಶ್ರಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

`ವಿಶ್ವನಾಥ್ ಅವರು ಸುಮಾರು 70 ಕೋಟಿ ರೂಪಾಯಿಗಳಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸೇರಿರುವ ಸುಮಾರು ಮೂರೂವರೆ ಎಕರೆ ಜಮೀನನ್ನು ಹೆಸರಘಟ್ಟ ಹಾಗೂ ಶ್ರೀರಾಮನಹಳ್ಳಿಯಲ್ಲಿ  ಹೊಂದಿದ್ದಾರೆ~ ಎನ್ನುವ ಆರೋಪ ಎದುರಿಸುತ್ತಿದ್ದಾರೆ. ಇವರ ವಿರುದ್ಧ ಶಶಿಧರ್ ಎನ್ನುವವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದರು.
 
ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಕೋರ್ಟ್ ಆದೇಶಿಸಿದೆ. ಆದುದರಿಂದ ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಹೆದರಿಕೆಯಿಂದ ನಿರೀಕ್ಷಣಾ ಜಾಮೀನು ಕೋರಿದ್ದಾರೆ.

ಇದೇ ಮನವಿ ಇಟ್ಟು ಲೋಕಾಯುಕ್ತ ಕೋರ್ಟ್‌ನಲ್ಲಿಯೂ ಅವರು ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ `ಇವರನ್ನು ಬಂಧಿಸಲು ಪೊಲೀಸರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ~ ಎಂದು ಪೊಲೀಸರು ತಿಳಿಸಿದ್ದ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಲಾಗಿತ್ತು. ಆದರೆ ಪೊಲೀಸರು ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟತೆ ಇಲ್ಲ ಎಂದಿರುವ ಅರ್ಜಿದಾರರು, ಈಗ ಹೈಕೋರ್ಟ್ ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT