ಪೀಣ್ಯ ದಾಸರಹಳ್ಳಿ: ಪ್ರತಿಯೊಬ್ಬರೂ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಆದರ್ಶ, ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ನಿತ್ಯದ ಕೆಲಸದ ನಡುವೆಯೂ ಬಡವ ಬಲ್ಲಿದರ ಕಷ್ಟ ಸುಖಗಳಿಗೆ ಶ್ರಮಿಸಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ರಾಜೇಂದ್ರ ಶರಣರು ಸಲಹೆ ಮಾಡಿದರು.
ಹೆಸರಘಟ್ಟ ಮುಖ್ಯ ರಸ್ತೆಯ ಎಚ್.ಕೆ.ಆರ್. ಕಲ್ಯಾಣ ಮಂಟಪದಲ್ಲಿ ಅಕ್ಕಮಹಾದೇವಿ ಮಹಿಳಾ ಸಮಾಜ ಹಾಗೂ ಬಸವ ಕೇಂದ್ರ ಏರ್ಪಡಿಸಿದ್ದ ಡಾ. ಶಿವಕುಮಾರ ಸ್ವಾಮೀಜಿಯವರ 105ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿ ಅರಿತು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಬೇರೆಯವರ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿ ಜನಪ್ರಿಯನಾಗುವುದರ ಜತೆಗೆ, ಬಲಿಷ್ಠ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗಲಿದೆ~ ಎಂದು ಅವರು ಅಭಿಪ್ರಾಯಪಟ್ಟರು.
ಶಿವಗಂಗೆಯ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, `ಶಿವಕುಮಾರ ಸ್ವಾಮೀಜಿಯವರು ಜಾತಿ- ಭೇದವಿಲ್ಲದೇ ಎಲ್ಲ ವರ್ಗದವರನ್ನು ಪ್ರೀತಿಸುವ ವ್ಯಕ್ತಿತ್ವ ಹೊಂದಿದ್ದಾರೆ. ಅವರು 21ನೇ ಶತಮಾನದ ಮಹಾನ್ ಚೇತನ~ ಎಂದು ಬಣ್ಣಿಸಿದರು.
ಮುಖಂಡ ಜಿ. ಮರಿಸ್ವಾಮಿ, ಅಕ್ಕಮಹಾದೇವಿ ಮಹಿಳಾ ಸಮಾಜದ ಖಜಾಂಚಿ ಎಚ್.ಎಸ್.ಸುಜಾತ, ಕಾಂಗ್ರೆಸ್ ಮುಖಂಡ ಸೌಂದರ್ಯ ಮಂಜಪ್ಪ, ಬಸವ ಸಮಿತಿ ಅಧ್ಯಕ್ಷ ವಿಶ್ವನಾಥಯ್ಯ, ವೀರಶೈವ ವೇದಿಕೆ ಅಧ್ಯಕ್ಷ ಬಸವರಾಜಣ್ಣ, ಮುಖಂಡರಾದ ವಿ.ಎನ್. ಸಿದ್ದಗಂಗಯ್ಯ, ಗುರುಸ್ವಾಮಿ, ಅಕ್ಕಮಹಾದೇವಿ ಮಹಿಳಾ ಸಮಾಜ ಪದಾಧಿಕಾರಿಗಳಾದ ಮಂಜುಳ, ಕವಿತಾ, ಜಯಂತಿ, ಶಾರದಾ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.