ADVERTISEMENT

ಶಿವಮೊಗ್ಗ-ಗುಲ್ಬರ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ...

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಶಿವಮೊಗ್ಗ ಮತ್ತು ಗುಲ್ಬರ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಮುಂದಿನ ವರ್ಷ ಕ್ರಮವಾಗಿ ಏಪ್ರಿಲ್ ಹಾಗೂ ಜುಲೈನಲ್ಲಿ ಸಂಚಾರ ಆರಂಭವಾಗಲಿದೆ~ ಎಂದು ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಡಾ.ರಾಜ್‌ಕುಮಾರ್ ಕತ್ರಿ ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ರೈಲು- ರಸ್ತೆ ಸಂಪರ್ಕ~ ಕುರಿತ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.`ಬಿಜಾಪುರ ಮತ್ತು ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು ಬಳ್ಳಾರಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.
 
ಈ ನಿಲ್ದಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ನಾಲ್ಕೂ ವಿಮಾನ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವದೊಂದಿಗೆ ನಿರ್ಮಿಸಲಾಗಿದೆ. ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಖರೀದಿಸಲಾಗುತ್ತಿದೆ~ ಎಂದರು.

`ರಾಜ್ಯ ಪ್ರಸ್ತುತ ಏಕೈಕ ಬಂದರು ಹೊಂದಿದ್ದು ತದಡಿಯಲ್ಲಿ ನೂತನ ಬಂದರು ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ ತಯಾರಾಗಿದೆ. ಇಲ್ಲಿ ಪರಿಸರ ಹಾಗೂ ಸಾಗರ ಜೀವ ವೈವಿಧ್ಯತೆ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯಿಂದ ನಡೆಸಿದ ಅಧ್ಯಯನ ಶೇ 80ರಷ್ಟು ಪೂರ್ಣಗೊಂಡಿದೆ. ಹುಬ್ಬಳ್ಳಿ ಅಂಕೋಲ ರೈಲು ಮಾರ್ಗ ಆರಂಭವಾದರೆ ಬಂದರಿನ ಮಹತ್ವ ಹೆಚ್ಚಲಿದೆ~ ಎಂದು ತಿಳಿಸಿದರು.

`ಖಾಸಗಿ ಸಹಭಾಗಿತ್ವ ಯೋಜನೆಯಡಿ ಬಿಜಾಪುರ- ಶಹಬಾದ್, ಧಾರವಾಡ -ಬೆಳಗಾವಿ, ತಾಳಗುಪ್ಪ- ಹೊನ್ನಾವರ ಹಾಗೂ ಹುಬ್ಬಳ್ಳಿ -ಅಂಕೋಲಾ ರೈಲು ಯೋಜನೆ ಅನುಮೋದನೆಗಾಗಿ ಕಾಯುತ್ತಿದ್ದು ಬಂಡವಾಳ ಹೂಡಿಕೆಗೆ  ಅವಕಾಶವಿದೆ~ ಎಂದರು.

ಈಗಾಗಲೇ 901 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ರೈಲ್ವೆ ಯೋಜನೆಗಳಿಗಾಗಿ ಸರ್ಕಾರ 2060.5 ಕೋಟಿ ರೂ. ಬಂಡವಾಳ ಹೂಡಿದೆ. ಈ ಹಣದಲ್ಲಿ 127 ಕಿ.ಮೀ. ಹೊಸ ಮಾರ್ಗ ನಿರ್ಮಾಣ, 799ಕಿ.ಮಿ. ಗೇಜ್ ಪರಿವರ್ತನೆ ಹಾಗೂ 270 ಕಿ.ಮೀ. ಡಬ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ~ ಎಂದರು. ಸಂಸ್ಥೆಯ ಅಧ್ಯಕ್ಷ ಜೆ.ಆರ್. ಬಂಗೇರ, ಮೂಲಸೌಕರ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಮಂಡೋತ್ ಇರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.