ಯಲಹಂಕ: ‘ಎತ್ತಿನಹೊಳೆ ಯೋಜನೆ ಜಾರಿಗೆ ಎಷ್ಟೇ ವಿರೋಧವಿದ್ದರೂ ಸಹ, ಜನರಿಗೆ ಶುದ್ಧಕುಡಿಯುವ ನೀರು ಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಪೆಟ್ರೋ ಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.
ಇಲ್ಲಿನ ಹಳೇನಗರದ ಮಸೀದಿ ರಸ್ತೆಯಲ್ಲಿ ಭಾನುವಾರ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉರ್ದುಶಾಲೆಯ ನೂತನ ಕೊಠಡಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಕಲುಷಿತ ನೀರನ್ನು ಕುಡಿದ 18 ವರ್ಷದ ಯುವಕರು 60 ವರ್ಷದವರಂತೆ ಕಾಣುತ್ತಿದ್ದು, ಕೆಲವರಿಗೆ ಹಲ್ಲುಗಳು ಉದುರಿವೆ. ಮತ್ತೆ ಕೆಲವರು ಅಂಗಹೀನತೆಯಿಂದ ನರಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಜನರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಆ ಭಾಗದ ಜನರಿಗೆ ಶುದ್ಧಕುಡಿಯುವ ನೀರು ಕೊಡಲು ಸಂಕಲ್ಪ ಮಾಡಿದ್ದೇನೆ’ ಎಂದರು.
ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕ ಎನ್.ರವಿಕುಮಾರ್ ಮಾತನಾಡಿ, ‘ಈ ಸಮುದಾಯ ಭವನವನ್ನು ವಕ್ಫ್‌ಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ಆದರೂ, ಈ ಆಸ್ತಿಯ ಆಡಳಿತ ಮಂಡಳಿಯವರು ಎಲ್ಲ ವರ್ಗದ ಜನರಿಗೂ ಉಪಯೋಗವಾಗುವಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ’ ಎಂದರು.
ಬಿಬಿಎಂಪಿ ಸದಸ್ಯ ವೈಎನ್.ಅಶ್ವಥ್, ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ, ಕೆಪಿಸಿಸಿ ಸದಸ್ಯರಾದ ಸಿ.ವೆಂಕಟೇಶ್, ಮು.ಕೃಷ್ಣಮೂರ್ತಿ, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ಭಾಷಾ, ಮಹಿಳಾ ಅಧ್ಯಕ್ಷೆ ಪ್ರೇಮಲತಾ, ಎಸ್‌ಸಿ ಘಟಕದ ಅಧ್ಯಕ್ಷ ಎನ್.ಎಂ.ಶ್ರೀನಿವಾಸ್ ಇದ್ದರು.
ನನಗೆ ಸುಳ್ಳು ಹೇಳಲು ಬರುವುದಿಲ್ಲ: ಮೊಯಿಲಿ
ದೊಡ್ಡಬಳ್ಳಾಪುರ: ನಾನು ಸುಳ್ಳು ಹೇಳುತ್ತಲೇ ಕಾಲಕಳೆದಿದ್ದರೆ ಈ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವನಾಗಲು ಸಾಧ್ಯ ಇರಲಿಲ್ಲ ಎಂದು ಕೇಂದ್ರ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸುಳ್ಳು ಹೇಳಿ ಅಧಿಕಾರಕ್ಕೆ ಬರಲು ಪ್ರಯತ್ನಿಸಿದವರೆಲ್ಲ ಇವತ್ತು ಮೂಲೆಗುಂಪಾಗಿರುವುದು ಇತಿಹಾಸ. ಬಿಜೆಪಿಯವರಂತೆ ನನಗೆ ಭಾಷಣ ಮಾಡಲು ಬರುವುದಿಲ್ಲ. ಕೆಲಸ ಮಾಡಿತೋರಿಸುವುದಷ್ಟೇ ಬರುತ್ತದೆ’ ಎಂದರು.
‘ನಾನು ಈ ಕ್ಷೇತ್ರಕ್ಕೆ ವಲಸೆ ಬಂದ ಹಕ್ಕಿ ಅಲ್ಲ. ಕನ್ನಡ ನಾಡಿನ ಮನುಷ್ಯ. ನನ್ನ ಬಗ್ಗೆ ಟೀಕೆ ಮಾಡುವ ಅನಂತ್‌ಕುಮಾರ್ ಸಹ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಲಸೆ ಬಂದವರೆ’ ಎಂದರು.
‘ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣವನ್ನು ಹಿಂದಕ್ಕೆ ಇಡಬೇಕು, ನೀರಿನ ಯೋಜನೆ ಮುಂದಿಡಬೇಕು, ಕರಾಳ ದಿನ, ಬಂದ್ ಆಚರಣೆ ಮಾಡುವದರಲ್ಲಿ ಅರ್ಥ ಇಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.