ADVERTISEMENT

‘ಶುಲ್ಕ ಕಟ್ಟದ ಐದು ಮಕ್ಕಳಿಗೆ ಪರೀಕ್ಷೆ ಇಲ್ಲ’

ಜೆ.ಪಿ.ನಗರ ಜ್ಞಾನ ಜ್ಯೋತಿ ಶಾಲೆಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:42 IST
Last Updated 26 ಮಾರ್ಚ್ 2018, 19:42 IST

ಬೆಂಗಳೂರು: ‘ಶಾಲಾ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಐದು ಮಕ್ಕಳನ್ನು ಪರೀಕ್ಷೆಗೆ ಕೂರಿಸಿಲ್ಲ’ ಎಂದು ಆರೋಪಿಸಿ ಕೆಲ ಪೋಷಕರು ಜೆ.ಪಿ.ನಗರದ ಜ್ಞಾನಜ್ಯೋತಿ ಶಾಲೆಯ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘ಅಶಿಸ್ತಿನ ಕಾರಣಕ್ಕೆ ಕೆಲ ತಿಂಗಳ ಹಿಂದೆ ಇಬ್ಬರು ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಿದ್ದೆವು. ಶಾಲೆಯ ಹೆಸರನ್ನು ಕೆಡಿಸಲು ಅವರೇ ಈ ರೀತಿ ಗೊಂದಲ ಸೃಷ್ಟಿಸಿದ್ದಾರೆ. ಶುಲ್ಕ ಕಟ್ಟದಿದ್ದರೂ ಮಕ್ಕಳನ್ನು ಪರೀಕ್ಷೆಗೆ ಕೂರಿಸಿದ್ದೇವೆ. ಆದರೆ, ಆ ಶಿಕ್ಷಕರು ಪೋಷಕರ ತಲೆ ಕೆಡಿಸಿ ಪರೀಕ್ಷೆ ಬರೆಯುತ್ತಿದ್ದ ಮಕ್ಕಳನ್ನು ಬಲವಂತವಾಗಿ ಕರೆದುಕೊಂಡು ಹೋಗುವಂತೆ ಮಾಡಿದ್ದಾರೆ’ ಎಂದು ಶಾಲಾ ಆಡಳಿತ ಮಂಡಳಿಯವರು ದೂರಿದ್ದಾರೆ.

‘ಇದೊಂದು ಅನುದಾನರಹಿತ ಖಾಸಗಿ ಶಾಲೆ. ಒಂದರಿಂದ ಒಂಬತ್ತನೇ ತರಗತಿವರೆಗೆ ಇಲ್ಲಿ ಕಲಿಸಲಾಗುತ್ತದೆ. ಸ್ಥಳಕ್ಕೆ ಭೇಟಿ ನೀಡಿದಾಗ ಪೋಷಕರು ಇರಲಿಲ್ಲ. ಪೋಷಕರಿಂದ ಯಾವುದೇ ದೂರುಗಳೂ ಬಂದಿಲ್ಲ. ಆದರೂ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಅಶ್ವತ್ಥನಾರಾಯಣ ಗೌಡ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.