ಬೆಂಗಳೂರು: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇಕಡ 60ಕ್ಕಿಂತಲೂ ಹೆಚ್ಚಿನ ಫಲಿತಾಂಶ ಪಡೆದ ಶ್ರವಣದೋಷವುಳ್ಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುರುವಾರ ಪ್ರತಿಭಾ ಪುರಸ್ಕಾರ ನೀಡಲಾಯಿತು.
‘ಫೌಂಡೇಷನ್ ಫಾರ್ ಆರ್ಟ್ ಅಂಡ್ ಕಲ್ಚರ್ ಫಾರ್ ಡೆಫ್’ ಸಂಸ್ಥೆಯು ಕರ್ನಾಟಕ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಒಟ್ಟು 34 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಸ್‍ವೀಕರಿಸಿದರು.
ಪುರಸ್ಕಾರವು ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿತ್ತು. ಎಲ್ಲಾ ಮಕ್ಕಳಿಗೂ ಟೈಟನ್ ಕಂಪೆನಿಯು ಕೈ ಗಡಿಯಾರ ಗಳನ್ನು ವಿತರಿಸಿತು.
ಕವಿ ಜಿ.ಎಸ್.ಸಿದ್ದಲಿಂಗಯ್ಯ ಹಾಗೂ ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರು ಮಕ್ಕಳಿಗೆ ಪುರಸ್ಕಾರಗಳನ್ನು ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಸಿದ್ದ ಲಿಂಗಯ್ಯ, ‘ಅಂಧತ್ವ ಇದ್ದರೂ ಹೆಲೆನ್ ಕೆಲ್ಲರ್ ಎಷ್ಟೊಂದು ಮಹಾನ್ ಸಾಧನೆ ಮಾಡಿದ್ದರು. ನೀವು ಕಮ್ಮಿಯೇನು ಅಲ್ಲ. ನೀವೆಲ್ಲ ದೇವರು ಮಕ್ಕಳು’ ಎಂದು ನುಡಿದರು.
ಪ್ರಮೀಳಾ ಜೋಷಾಯ್ ಮಾತ ನಾಡಿ, ‘ಕಿವಿ ಕೇಳಿಸದ, ಮಾತು ಬಾರದ ಮಕ್ಕಳು ಇಷ್ಟೊಂದು ಉತ್ತಮ ಅಂಕ ತೆಗೆದಿದ್ದಾರೆ. ಅನೇಕರು ಶೇಕಡ 80ಕ್ಕೂ ಹೆಚ್ಚು ಅಂಕ ಪಡೆದಿರುವುದು ಸಂತೋಷದ ಸಂಗತಿ. ನೀವೆಲ್ಲ ಮುಂದೆ ಬನ್ನಿ. ನಿಮಗೆ ಸಹಾಯ ಬೇಕಾದರೆ, ಅದಕ್ಕೆ ನಾನು ಸಿದ್ಧನಿರುವೆ’ ಎಂದು ಅಭಯ ನೀಡಿದರು.
*
ಕನಸು ಬಿಚ್ಚಿಟ್ಟ ಮಕ್ಕಳು
‘ನನಗೆ ಬ್ಯಾಂಕ್ ಉದ್ಯೋಗ ಮಾಡುವ ಆಸೆ. ಅಲ್ಲಿ ಕಂಪ್ಯೂಟ ರ್‌ನಲ್ಲಿ ಕೆಲಸ ಮಾಡುತ್ತೇನೆ. ಅದು ನನಗೆ ಸುಲಭ’ -ಇದು ಬಿಬಿಎ ವ್ಯಾಸಂಗ ಮಾಡುತ್ತಿರುವ ಶ್ರವಣದೋಷವುಳ್ಳ ವಿದ್ಯಾರ್ಥಿನಿ ಚೈತನ್ಯಾ ನುಡಿ.
ಪ್ರತಿಭಾ ಪುರಸ್ಕಾರವನ್ನು ಸ್ವೀಕರಿಸಿ ಅವರು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದರು. ಅವರಿಗೆ ಅವರ ತಾಯಿ ಪ್ರಮೀಳಾ ನೆರವಾದರು.
‘ಪಿಯುಸಿ ತನಕ ಕನ್ನಡ ಮಾಧ್ಯಮದಲ್ಲಿ ಓದಿದ್ದು, ಈಗ ಇಂಗ್ಲಿಷ್ ಅಭ್ಯಸಿಸಬೇಕಿದೆ. ಅದಕ್ಕಾಗಿ ದಿನವೂ ನಿಂಘಟು ಇಟ್ಟುಕೊಂಡು ಅಧ್ಯಯನ ಮಾಡುತ್ತಿದ್ದೇನೆ. ಬ್ಯಾಂಕ್ ಉದ್ಯೋಗಕ್ಕೆ ನೆರವಾಗುವಂತೆ ಕಂಪ್ಯೂಟರ್ ಕೂಡ ಕಲಿಯುತ್ತಿದ್ದೇನೆ’ ಎಂದು ಉತ್ಸಾಹದಿಂದ ತಿಳಿಸಿದರು.
ಶ್ರವಣದೋಷವುಳ್ಳ ಮತ್ತೊಬ್ಬ ವಿದ್ಯಾರ್ಥಿ ಎಸ್.ವರ್ಷಾ, ತಾನೂ ಬ್ಯಾಂಕ್ ಉದ್ಯೋಗ ಮಾಡುವ ಕನಸು ಬಿಚ್ಚಿಟ್ಟರು.
ಕಿವಿಗೆ ಅಳವಡಿಸಲಾದ ಯಂತ್ರದ ನೆರವಿನಿಂದ ‘ಪ್ರಜಾವಾಣಿ’ಯ ಪ್ರಶ್ನೆಗಳಿಗೆ ಸ್ವಯಂ ಉತ್ತರಿಸಲು ಯತ್ನಿಸಿದರು. ಅವರ ತಾಯಿ ಎಸ್.ಮೈತ್ರಾ ಅವರು ಆಗಾಗ ಮಗಳ ನೆರವಿಗೆ ಬಂದರು.
‘ಎಸ್ಸೆಸ್ಸೆಲ್ಸಿಯಲ್ಲಿ 82 ಹಾಗೂ ಪಿಯುಸಿಯಲ್ಲಿ ಶೇ 76ರಷ್ಟು ಫಲಿತಾಂಶ ಪಡೆದಿದ್ದೆ. ಸದ್ಯ ಬಿ.ಕಾಂ ಓದುತ್ತಿದ್ದು, ಎಂ.ಕಾಂ ಮುಗಿಸಿ ಬ್ಯಾಂಕ್ ಉದ್ಯೋಗಕ್ಕೆ ಸೇರುವ ಗುರಿಯಿದೆ’ ಎಂದರು.
‘ಬ್ಯಾಂಕ್ ಉದ್ಯೋಗವೇ ಏಕೆ?’ ಎಂದಾಗ, ‘ನನಗೆ ಲೆಕ್ಕಶಾಸ್ತ್ರ ಅಚ್ಚುಮೆಚ್ಚು. ಬ್ಯಾಂಕಿಂಗ್ ಉದ್ಯೋಗದಲ್ಲಿ ಅದಕ್ಕೆ ಅವಕಾಶ ಹೆಚ್ಚು’ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.