ADVERTISEMENT

ಶ್ರೀನಿವಾಸ್ ಕೊಲೆ ಹಿಂದೆ ರಾಜಕೀಯ?

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಬೆಂಗಳೂರು: ಬಿಬಿಎಂಪಿಯ ಬಿಜೆಪಿ ಸದಸ್ಯೆ ಆರ್‌.ಮಂಜುಳಾದೇವಿ ಅವರ ಪತಿ ಶ್ರೀನಿವಾಸ್‌ ಕೊಲೆಯ ಹಿಂದೆ ರಾಜಕೀಯ ಕೈವಾಡವಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ಈ ಭಾಗದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರ ನಡುವೆ ಗುದ್ದಾಟ ನಡೆಯುತ್ತಲೇ ಇದೆ. ಹೀಗಾಗಿ ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.

‘ಮೊದಲು ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಬೆಂಬಲಿಗರಾಗಿದ್ದ ಶ್ರೀನಿವಾಸ್‌, 2008ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಪಕ್ಷವನ್ನು ಸೇರಿದ್ದರು. ನಂತರ ಬಿಜೆಪಿ ಶಾಸಕ ಎನ್‌.ಎಸ್‌.ನಂದೀಶ್ ರೆಡ್ಡಿ ಅವರ ಬೆಂಬಲಕ್ಕೆ  ನಿಂತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭೈರತಿ ಬಸವರಾಜ್‌ ಅವರ ವಿರುದ್ಧ ರೆಡ್ಡಿ ಸೋಲನುಭವಿಸಿದರು. ಆ ನಂತರ ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ಜಗಳ ತೀವ್ರವಾಯಿತು’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

‘2013ರ ಏಪ್ರಿಲ್ 20 ರಂದು ಶ್ರೀನಿವಾಸ್ ಮತ್ತು ಸ್ನೇಹಿತ ವಿಶ್ವನಾಥ್‌ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಆಗ ಕಾಂಗ್ರೆಸ್‌ ಕಾರ್ಯಕರ್ತರು ಎನ್ನಲಾದ ಕೆಲ ದುಷ್ಕರ್ಮಿಗಳು, ಶ್ರೀನಿವಾಸ್‌ ಅವರ ಕೊಲೆಗೆ ಸಂಚು ರೂಪಿಸಿದ್ದರು. ಸಂಚಿನಂತೆ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿ ಬಂದ ದುಷ್ಕರ್ಮಿಗಳು, ಶ್ರೀನಿವಾಸ್‌ಗೆ ಬದಲಾಗಿ ಅವರ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಆ ಆರೋಪಿಗಳು ಇತ್ತೀಚೆಗೆ ಜೈಲಿನಿಂದ ಹೊರಬಂ ದಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಈ ಭಾಗದಲ್ಲಿ ಪೊಲೀಸ್‌ ವ್ಯವಸ್ಥೆ ಸರಿ ಇಲ್ಲ. ಈ ಹಿಂದೆ ಶ್ರೀನಿವಾಸ್ ಕೊಲೆಗೆ ಯತ್ನಿಸಿದ್ದ ಆರೋಪಿಗಳು  ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರು ಮತ್ತೊಮ್ಮೆ ಸಂಚು  ರೂಪಿಸುವ ಸಾಧ್ಯತೆ ಬಗ್ಗೆ ಪೊಲೀಸರಿಗೆ ಅರಿವು ಇರಬೇಕಾಗಿತ್ತು. ಅದಕ್ಕೆ ಅನುಗು ಣವಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳ ಬಹುದಿತ್ತು’ ಎಂದು ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾದ ಭೈರತಿ ಬಸವರಾಜ್‌, ರಾಜಕೀಯ ಲಾಭಕ್ಕಾಗಿ ಕೆ.ಆರ್.ಪುರ ಉಪವಿಭಾಗದ ಠಾಣೆಗಳಿಗೆ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರನ್ನೇ ಇನ್‌ಸ್ಪೆಕ್ಟರ್‌ ಗಳಾಗಿ ನೇಮಕ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಬೆಂಬಲಿಗರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೂ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ’ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬೈರತಿ ಬಸವರಾಜ್, ‘ಶ್ರೀನಿವಾಸ್‌ ಒಳ್ಳೆಯ ಸ್ನೇಹಿತರಾಗಿದ್ದರು. ಹಣಕಾಸು ಮತ್ತು ಭೂವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅವರ ಕುಟುಂಬ ಸದಸ್ಯರಲ್ಲೇ ಮನಸ್ತಾಪ ಇತ್ತು. ಹೀಗಾಗಿ ವೈಯಕ್ತಿಕ ಕಾರಣಗಳಿಂದ ಅವರು ಕೊಲೆಯಾಗಿರುವ ಸಾಧ್ಯತೆ ಇದೆ. ಆದರೆ, ಪರಿಸ್ಥಿತಿಯ  ಲಾಭ ಪಡೆಯಲು ಕೆಲವರು ಕೊಲೆಯ ಹಿಂದೆ ರಾಜಕೀಯದ ಕೈವಾ ಡವಿದೆ ಎಂದು ಆರೋಪ ಮಾಡುತ್ತಿದ್ದಾರೆ’ ಎಂದರು.

‘ಈ ಕ್ಷೇತ್ರದಲ್ಲಿ ಕಾರ್ಯಕರ್ತರ ನಡುವೆ ಹಲವು ವರ್ಷಗಳಿಂದ ಜಗಳ ನಡೆಯುತ್ತಲೇ ಇದೆ. ಹೀಗಾಗಿ ಕಾರ್ಯಕರ್ತನೊಬ್ಬ ವೈಯಕ್ತಿಕ ದ್ವೇಷದಿಂದ ಕೊಲೆಯಾದರೂ, ಅದು ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಆರೋಪ ಬರುತ್ತದೆ. ಕಳೆದ ವರ್ಷ ಶ್ರೀನಿವಾಸ್ ಮೇಲೆ ನಡೆದ ಹಲ್ಲೆ ಯತ್ನಕ್ಕೂ ನನಗೂ ಸಂಬಂಧವಿಲ್ಲ. ಈಗಿನ ಘಟನೆಯಲ್ಲೂ ಯಾವುದೇ ಪಾತ್ರವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.