ADVERTISEMENT

ಶ್ರೇಷ್ಠ ಚಿಂತನೆಯಿಂದಲೇ ಭಾರತ ಪ್ರಕಾಶಿಸುತ್ತಿದೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 19:45 IST
Last Updated 24 ಫೆಬ್ರುವರಿ 2011, 19:45 IST

ಬೆಂಗಳೂರು: ‘ಜಗತ್ತಿನ ಎಲ್ಲಾ ಭಾಗದಲ್ಲೂ ಅಸ್ತಿತ್ವದಲ್ಲಿರುವ ಶ್ರೇಷ್ಠ ಚಿಂತನೆಗಳನ್ನು ಅಳವಡಿಸಿಕೊಂಡಿರುವ ಭಾರತವು ವಿಶ್ವ ಭೂಪಟದಲ್ಲಿ ಎಂದಿಗೂ ಪ್ರಕಾಶಿಸುತ್ತದೆ’ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸ್ಥಾಪಕ ನಿರ್ದೇಶಕ ಪ್ರೊ.ಎನ್.ಎಸ್.ರಾಮಸ್ವಾಮಿ ಅಭಿಪ್ರಾಯಪಟ್ಟರು.

ಸೀಮಾ ಸುಂಕ ಮತ್ತು ಅಬಕಾರಿ ಇಲಾಖೆ ಗುರುವಾರ ಪುರಭವನದಲ್ಲಿ ಆಯೋಜಿಸಿದ್ದ ‘ಕೇಂದ್ರ ಅಬಕಾರಿ ದಿನಾಚರಣೆ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಜಗತ್ತಿನಲ್ಲಿ ಭಾರತಕ್ಕೆ ಸಮಕಾಲೀನವಾದ ಎಲ್ಲಾ ನಾಗರಿಕತೆಗಳು ಅಳಿದರೂ ಭಾರತದ ನಾಗರಿಕತೆ ಇಂದಿಗೂ ಕ್ರಿಯಾಶೀಲವಾಗಿದೆ. ನಮ್ಮಲ್ಲಿರುವ ವಿಭಿನ್ನ ಸಂಸ್ಕೃತಿಯೇ ಇದಕ್ಕೆ ಕಾರಣ’ ಎಂದು ತಿಳಿಸಿದರು.

‘ಬೇರೆಲ್ಲಾ ರಾಜ್ಯದ ಜನಕ್ಕೆ ಹೋಲಿಸಿದರೆ ಕನ್ನಡಿಗರು ಶಾಂತಿಪ್ರಿಯರು. ಇಲ್ಲಿನ ಕಲೆ, ಸಾಹಿತ್ಯ, ಸಂಗೀತ ಉಸಿರಾಡುತ್ತಿರಲು ಅವರ ಹೃದಯ ವೈಶಾಲ್ಯತೆಯೇ ಕಾರಣ’ ಎಂದರು. ‘ನಾನು ಹಲವು ಉತ್ತಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇನೆ.ಇದರ ಭಾಗವಾಗಿ ಸರ್ಕಾರದ ರೀತಿ ನೀತಿಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಹೋರಾಡಿದೆ. ಆದರೆ ಸಾಧ್ಯವಾಗಲಿಲ್ಲ. ನನ್ನ ಪ್ರಯತ್ನಕ್ಕೆ ಸರ್ಕಾರ ಪದ್ಮಭೂಷಣ ನೀಡಿತು’ ಎಂದು ಮಾರ್ಮಿಕವಾಗಿ ಹೇಳಿದರು.

’ಸರ್ಕಾರದ ರೀತಿ ನೀತಿಗಳು ಬದಲಾಗದೇ ದೇಶ ಉದ್ದಾರವಾಗಲು ಸಾಧ್ಯವಿಲ್ಲ, ಕೇವಲ ಇನ್ಫೊಸಿಸ್, ವಿಪ್ರೋದಂತಹ ಕಾರ್ಪೋರೇಟ್ ಜಗತ್ತು ಮಾತ್ರ ವೇಗವಾಗಿ ಬೆಳೆಯುತ್ತಿದೆ. ಆದರೆ ನಾವೇ ಆಯ್ಕೆ ಮಾಡಿದ ಸರ್ಕಾರ ಅಭಿವೃದ್ಧಿ ಪಥದಲ್ಲಿ ಸಾಗದಿರುವುದು ವಿಷಾದನೀಯ’ ಎಂದರು.

ರಂಗಕರ್ಮಿ ಸಿ.ಆರ್.ಸಿಂಹ ಮಾತನಾಡಿ, ‘ಪ್ರತಿಯೊಬ್ಬ ನಾಗರಿಕನು ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ತೆರಿಗೆ ಕಟ್ಟುವುದರಿಂದ ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡಂತಾಗುತ್ತದೆ’ ಎಂದು ಹೇಳಿದರು.ಇಲಾಖೆಯ ಬೆಂಗಳೂರು ವಿಭಾಗದ ಆಯುಕ್ತ ಆರ್.ವಿ.ವೆಂಕಟರಾಮನ್, ಎನ್‌ಎಸಿಇಎನ್ ಸಂಸ್ಥೆಯ ಹೆಚ್ಚುವರಿ ನಿರ್ದೇಶಕಿ ಜಾಯ್ ಕುಮಾರಿ ಚಂದರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.