ADVERTISEMENT

ಸಂಜಯ ಗಾಂಧಿ ಆಸ್ಪತ್ರೆಗೆ ಎನ್‌ಎಬಿಎಚ್‌ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:46 IST
Last Updated 2 ಮಾರ್ಚ್ 2018, 19:46 IST

ಬೆಂಗಳೂರು: ನಗರದ ಸಂಜಯ ಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆಗೆ ‘ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿ’ ಮಾನ್ಯತೆ ಸಿಕ್ಕಿದೆ.

ಈ ಮೂಲಕ ಎನ್‌ಎಬಿಎಚ್‌ ಮಾನ್ಯತೆ ಪಡೆದ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಸಾಲಿಗೆ ಆಸ್ಪತ್ರೆ ಸೇರ್ಪಡೆಗೊಂಡಿದೆ. ಈ ಮಾನ್ಯತೆಯು 2020ರ ಫೆ.17ರ ವರೆಗೆ ಚಾಲ್ತಿಯಲ್ಲಿರುತ್ತದೆ.

ಸಂಸ್ಥೆಯ ನಿರ್ದೇಶಕ ಡಾ.ಎಚ್.ಎಸ್.ಚಂದ್ರಶೇಖರ್ ಪ್ರತಿಕ್ರಿಯಿಸಿ, ‘ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದೆವು. ಎನ್ಎಬಿಎಚ್‌ನಿಂದ ನೀಡಲಾದ ಸಿದ್ಧ
ತೆಯ ಸೂಚನಾ ಪಟ್ಟಿಯಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದೆವು. ಅದರ ಫಲವಾಗಿ ಮಾನ್ಯತೆ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

ಸಂಸ್ಥೆಯ ಸಿಬ್ಬಂದಿಯ ಬದ್ಧತೆ, ಸಮರ್ಪಣಾ ಮನೋಭಾವ, ಅತ್ಯುತ್ತಮ ವೈಜ್ಞಾನಿಕ ಪದ್ಧತಿಗಳು, ಆಡಳಿತಾತ್ಮಕ ತಿದ್ದುಪಡಿಗಳು, ಗುಣಮಟ್ಟದ ಚಿಕಿತ್ಸೆ, ಉತ್ತಮ ಆರೈಕೆ, ನೈರ್ಮಲ್ಯ, ಸೋಂಕು ನಿಯಂತ್ರಣ, ಮೂಲ ಸೌಕರ್ಯಗಳ ನಿರ್ವಹಣೆ, ಔಷಧಾಲಯ, ಅಗ್ನಿ ಸುರಕ್ಷತಾ ಕ್ರಮಗಳು ಸೇರಿದಂತೆ 200ಕ್ಕೂ ಅಧಿಕ ಅಂಶಗಳನ್ನು ಪರಿಶೀಲಿಸಿದ್ದಾರೆ ಎಂದು ಹೇಳಿದರು.

ಮಾನ್ಯತೆಯಿಂದಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುವ ಆರ್ಥಿಕ ನೆರವಿನ ಪ್ರಮಾಣವು ಏರಿಕೆ ‌ಯಾಗಲಿದೆ. ಈ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಆರೋಗ್ಯ ವಿಮೆ ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

‘ಈಗ ಸಿಕ್ಕಿರುವುದು ಮೊದಲ ಹಂತದ ಮಾನ್ಯತೆ. ಎರಡನೇ ಹಂತದ ಮಾನ್ಯತೆಗೆ ತಯಾರಾಗಿದ್ದೇವೆ. ನಮ್ಮ ಪ್ರಯತ್ನ ಯಶಸ್ಸು ಕಂಡರೆ ಆಸ್ಪತ್ರೆಯ ಚಹರೆಯೇ ಬದಲಾಗಲಿದೆ. ಕಾರ್ಪೊರೇಟ್ ಆಸ್ಪತ್ರೆಯ ಸ್ಥಾನಮಾನ ಲಭಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.