ADVERTISEMENT

ಸಂತೆ ಮೈದಾನ: ಮೂಲ ಸೌಕರ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:52 IST
Last Updated 22 ಸೆಪ್ಟೆಂಬರ್ 2013, 19:52 IST

ಕೃಷ್ಣರಾಜಪುರ: ಶಾಂತಿ ಬಡಾವಣೆಯಲ್ಲಿ ಪ್ರತಿ ಭಾನುವಾರ ನಡೆಯುವ  ರಾಮ ಮೂರ್ತಿ ನಗರ ಸಂತೆ ಮೈದಾನದಲ್ಲಿ ಮೂಲಸೌಕರ್ಯದ ಕೊರತೆ ಇದೆ. ರಸ್ತೆಗಳು  ದುರಸ್ತಿಯಾಗಿಲ್ಲ’ ಎಂದು ರೈತರು, ಹಣ್ಣು ಹಾಗೂ ತರಕಾರಿ ವ್ಯಾಪಾರಿಗಳು ದೂರಿದ್ದಾರೆ.

‘ಸಂತೆಗೆ ಹೊಸಕೋಟೆ, ಶ್ರೀನಿವಾಸ ಪುರ ಇತರ ಗ್ರಾಮಗಳಿಂದ ರೈತರು ಬೆಳೆದ ಸಾಮಗ್ರಿಗಳನ್ನು ಎತ್ತಿನ ಗಾಡಿ ಯಲ್ಲಿ  ತುಂಬಿಕೊಂಡು ಶನಿವಾರ ರಾತ್ರಿ ಸಂತೆಗೆ ಬರುತ್ತಾರೆ. ಆದರೆ, ಸಂಪರ್ಕಿ ಸುವ ರಸ್ತೆ  ದುರಸ್ತಿ ಆಗಿಲ್ಲ. ಪ್ರಯಾಸ ದಿಂದ ಆವರಣಕ್ಕಿಳಿದರೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸಾರ್ವಜನಿಕ ಶೌಚಾಲಯವೂ ಇಲ್ಲ’ ಎಂದು ತೆಂಗಿನಕಾಯಿ ವ್ಯಾಪಾರಿ ತಿಪ್ಪಸಂದ್ರದ ಮಾರಪ್ಪ ಬೇಸರಪಟ್ಟರು.

‘ಹಿಂದೆ ನಾವು ಕಲ್ಕೆರೆ ರಸ್ತೆ  ಮಾರ್ಗದಲ್ಲಿ ಸಂತೆ ನಡೆಸುತ್ತಿದ್ದೆವು. ಶಾಂತಿ ಬಡಾವಣೆ ಮೈದಾನಕ್ಕೆ ಸಂತೆ ಸ್ಥಳಾಂತರಗೊಂಡಾಗ ಖುಷಿ ಪಟ್ಟಿದ್ದೆವು. ಆದರೆ ಇಲ್ಲಿ ಯಾವುದೇ ರೀತಿಯ ಸೌಲಭ್ಯ ನೀಡಿಲ್ಲ. ಮೈದಾನ ತಗ್ಗು ದಿಣ್ಣೆಗಳಿಂದ ಕೂಡಿದೆ’ ಎಂದು ತರಕಾರಿ ವ್ಯಾಪಾರಿ ಕೆಂಚನಾಯಕ ಅಳಲು ತೋಡಿಕೊಂಡರು.

‘ವ್ಯವಸ್ಥಿತ ರೀತಿಯಲ್ಲಿ ಸಂತೆ ನಡೆಯುತ್ತಿಲ್ಲ. ಈಚಿನ ದಿನಗಳಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಅಗತ್ಯ ಮೂಲಸೌಕರ್ಯ  ಒದಗಿಸಲು ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.