ADVERTISEMENT

ಸಂಪಂಗಿ ಪ್ರಕರಣ: 21ಕ್ಕೆ ಅಂತಿಮ ವಾದ

​ಪ್ರಜಾವಾಣಿ ವಾರ್ತೆ
Published 2 ಮೇ 2012, 19:30 IST
Last Updated 2 ಮೇ 2012, 19:30 IST

ಬೆಂಗಳೂರು: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್ ಶಾಸಕ ವೈ.ಸಂಪಂಗಿ ಮತ್ತು ಆಂಡರ್ಸನ್ ಪೇಟೆ ಪೊಲೀಸ್ ಠಾಣೆಯ ಹಿಂದಿನ ಸಬ್ ಇನ್‌ಸ್ಪೆಕ್ಟರ್ ಮುಷ್ತಾಕ್ ಪಾಷಾ ಅವರ ಹೇಳಿಕೆಯನ್ನು ಬುಧವಾರ ದಾಖಲಿಸಿಕೊಂಡ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಇದೇ 21ರಂದು ಅಂತಿಮ ವಾದ ಮಂಡನೆಗೆ ಸಮಯ ನಿಗದಿ ಮಾಡಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಎದುರಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಹಾಜರಾದ ಸಂಪಂಗಿ ಮತ್ತು ಪಾಷಾ, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಪಂಗಿ 30ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದ್ದು, ರಾಜಕೀಯ ದುರುದ್ದೇಶದಿಂದ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ದೂರಿದರು.

ಪ್ರಶ್ನೆಗಳನ್ನು ಕೇಳಿದ ಬಳಿಕ, ಸಂಪಂಗಿ ಅವರಿಗೆ ತಮ್ಮ ಹೇಳಿಕೆ ನೀಡಲು ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಅವಕಾಶ ಕಲ್ಪಿಸಿದರು. ಆಗ ಹೇಳಿಕೆ ನೀಡಿದ ಅವರು, `2009ರ ಜನವರಿ 29ರಂದು ನಾನು ಶಾಸಕರ ಭವನದಲ್ಲಿದ್ದೆ.

ಬೆಳಿಗ್ಗೆ 11.30ಕ್ಕೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ತಮ್ಮನ್ನು ಫರೂಕ್ ಅಹಮ್ಮದ್ ಎಂದು ಪರಿಚಯಿಸಿಕೊಂಡರು. ನನ್ನ ಮತಕ್ಷೇತ್ರದ ನಯಾಜ್ ಅಹಮ್ಮದ್ ಎಂಬುವರ ಜೊತೆಗಿನ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ರಾಜಿ ಮಾಡಿಸುವಂತೆ ಮನವಿ ಮಾಡಿದ್ದರು. ಒಬ್ಬರೇ ಬಂದರೆ ಮಾತುಕತೆ ನಡೆಸಲು ಸಾಧ್ಯವಿಲ್ಲ. ನಯಾಜ್ ಅವರೊಂದಿಗೆ ಬಂದರೆ ರಾಜಿಗೆ ಪ್ರಯತ್ನಿಸಬಹುದು ಎಂಬುದಾಗಿ ನಾನು ಹೇಳಿದ್ದೆ~ ಎಂದು ತಿಳಿಸಿದರು.

`ಮಧ್ಯಾಹ್ನ 10-15 ಜನರೊಂದಿಗೆ ಫರೂಕ್ ಮತ್ತೆ ಅಲ್ಲಿಗೆ ಬಂದರು. ನನ್ನ ಎದುರು ಚುನಾವಣೆಯಲ್ಲಿ ಸೋತಿದ್ದ ಭಕ್ತವತ್ಸಲ ಕೂಡ ಅವರೊಂದಿಗೆ ಇದ್ದರು. ಅವರ ಜೊತೆಗಿದ್ದ ಒಬ್ಬ ವ್ಯಕ್ತಿ ಡಿವೈಎಸ್‌ಪಿ ಪರಮೇಶ್ವರಪ್ಪ ಎಂಬುದು ನಂತರ ನನಗೆ ಗೊತ್ತಾಯಿತು. ಒಳಕ್ಕೆ ಬಂದ ಫರೂಕ್ ನನ್ನ ಮೈಮೇಲೆ ಒಂದು ಪುಡಿ  ಚೆಲ್ಲಿದ. ನಂತರ ಹಣ ಮತ್ತು ಚೆಕ್ ಮೇಜಿನ ಮೇಲೆ ಇರಿಸಿದ. ಆತನ ಬಳಿ ರಿವಾಲ್ವರ್ ಇತ್ತು~ ಎಂದು ಹೇಳಿದರು.

`ನಂತರ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದ ಪರಮೇಶ್ವರಪ್ಪ ಹಣ ಮತ್ತು ಚೆಕ್ ಎತ್ತಿಕೊಳ್ಳುವಂತೆ ಸೂಚಿಸಿದರು. ಹಾಗೆ ಮಾಡದಿದ್ದರೆ ಕೊಲ್ಲುವುದಾಗಿ ಫರೂಕ್ ಬೆದರಿಸಿದ. ಜೀವ ಬೆದರಿಕೆಯಿಂದ ನಾನು ಅವರು ಹೇಳಿದಂತೆ ನಡೆದುಕೊಂಡೆ. ನಂತರ ಖಾಲಿ ಹಾಳೆ ನೀಡಿ, ಅವರಿಗೆ ಬೇಕಾದಂತೆ ನನ್ನಿಂದ ಬರೆಸಿ ಸಹಿ ಪಡೆದರು. ನನ್ನ ರಾಜಕೀಯ ಭವಿಷ್ಯ  ಅಂತ್ಯಗೊಳಿಸಲು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನನಗೂ ಈ ವಿವಾದಕ್ಕೂ ಯಾವುದೇ ಸಂಬಂಧ ಇಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.