ADVERTISEMENT

ಸಂಪುಟ ನಿರ್ಧರಿಸದಿದ್ದರೆ ನಾಳೆಯಿಂದ ಮುಷ್ಕರ: ಉಪನ್ಯಾಸಕರ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ಬೆಂಗಳೂರು: `ಗುರುವಾರ (ಏ.12) ನಡೆಯುವ ಸಂಪುಟ ಸಭೆಯಲ್ಲಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ವೇತನ ಶ್ರೇಣಿಯನ್ನು ನಿಗದಿಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳದಿದ್ದರೆ, ಅನಿವಾರ್ಯವಾಗಿ ಶುಕ್ರವಾರದಿಂದ ಮೌಲ್ಯಮಾಪನ ಬಹಿಷ್ಕಾರ ಮಾಡಬೇಕಾಗುತ್ತದೆ~ ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯದರ್ಶಿ ತಿಮ್ಮಯ್ಯ ಪುರ್ಲೆ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಸಂಘಟನೆಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೇತನ ತಾರತಮ್ಯವನ್ನು ಸರಿಪಡಿಸುವಂತೆ ಮನವಿ ಸಲ್ಲಿಸಿದೆ. ಆದರೆ, ಯಾವುದೇ ಸಕಾರಾತ್ಮಕ ಸ್ಪಂದನೆ ಮತ್ತು ಆಶ್ವಾಸನೆಗಳು ಸಿಗದಿದ್ದಾಗ ಸಂಘಟನೆಗಳು ಏ.6 ರಿಂದ 8 ರವರೆಗೆ ಧರಣಿಯನ್ನು ಆರಂಭಿಸಿದ್ದವು~ ಎಂದು ವಿವರಿಸಿದರು.

`ಶಿಕ್ಷಣ ಸಚಿವರು ಸಂಘಟನೆಗಳ ಪದಾಧಿಕಾರಿಗಳು ಮತ್ತು ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ಸಭೆ ನಡೆಸಿ, ಚರ್ಚಿಸಿ ಇನ್ನು ಎರಡು ಮೂರು ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳನ್ನು ಅಧಿಕಾರಿಗಳ ಸಭೆ ಕರೆದು ಬಗೆಹರಿಸುತ್ತೇನೆ ಮತ್ತು ವೇತನ ತಾರತಮ್ಯದ ವಿಚಾರವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗುರುವಾರ (ಏ.12) ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದರು~ ಎಂದು ಹೇಳಿದರು.

`ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಸರ್ಕಾರವನ್ನು ಬ್ಲಾಕ್‌ಮೇಲ್ ತಂತ್ರದ ಮೇಲೆ ಮಣಿಸಲು ನೋಡುತ್ತಿದ್ದಾರೆ ಎಂದು ಶಿಕ್ಷಣ ಸಚಿವರು ನೀಡಿರುವ ಪತ್ರಿಕಾ ಹೇಳಿಕೆ ನಿಜಕ್ಕೂ ಆಘಾತಕಾರಿಯಾಗಿದೆ~ ಎಂದರು.

`ನಮಗೆ ಸರ್ಕಾರದ ಮೇಲೆ ವಿಶ್ವಾಸವಿದೆ. ಗುರುವಾರದ ಸಂಜೆವರೆಗೆ ಕಾಯ್ದು ನೋಡುತ್ತೇವೆ. ಅಲ್ಲಿಯೂ ಏನೂ ನಿರ್ಧಾರ ಕೈಗೊಳ್ಳದಿದ್ದರೆ, ನಾವು ಮುಷ್ಕರವನ್ನು ಮುಂದುವರಿಸಿ ಮೌಲ್ಯಮಾಪನವನ್ನು ಬಹಿಷ್ಕರಿಸಬೇಕಾಗುತ್ತದೆ. ಇದರಿಂದಾಗುವ ಮಕ್ಕಳ ಭವಿಷ್ಯದ ಮೇಲಿನ ಪರಿಣಾಮಕ್ಕೆ ನೇರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ~ ಎಂದು ಹೇಳಿದರು.

`ಇದರ ಕುರಿತು ಸರ್ಕಾರ ಚಿಂತಿಸಿ ವೇತನ ತಾರತಮ್ಯ ನೀತಿಯನ್ನು ಸರಿಪಡಿಸದಿದ್ದರೆ, ಮುಂದಿನ ಕ್ರಮವಾಗಿ ಸಾಮೂಹಿಕ ರಾಜೀನಾಮೆ ನೀಡಲಾಗುವುದು~ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.