ADVERTISEMENT

ಸಂಭ್ರಮದ ಕರಗಕ್ಕೆ ಸಹಸ್ರಾರು ಭಕ್ತರ ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 20:00 IST
Last Updated 18 ಏಪ್ರಿಲ್ 2011, 20:00 IST
ಸಂಭ್ರಮದ ಕರಗಕ್ಕೆ ಸಹಸ್ರಾರು ಭಕ್ತರ ಸಾಕ್ಷಿ
ಸಂಭ್ರಮದ ಕರಗಕ್ಕೆ ಸಹಸ್ರಾರು ಭಕ್ತರ ಸಾಕ್ಷಿ   

ಬೆಂಗಳೂರು: ಚೈತ್ರ ಮಾಸದ ಬೆಳದಿಂಗಳ ರಾತ್ರಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಖ್ಯಾತ ‘ಬೆಂಗಳೂರು ಕರಗ’ ಸಂಭ್ರಮದಿಂದ ನಡೆಯಿತು.
ಸೋಮವಾರ ಮಧ್ಯರಾತ್ರಿ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರಗಕ್ಕೆ ಚಾಲನೆ ನೀಡಿದರು. ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದ ಮುಂದೆ ಅರಿಶಿಣ ಬಣ್ಣದ ಪೀತಾಂಬರ ತೊಟ್ಟಿದ್ದ ಸಿ.ಎಂ.ಲೋಕೇಶ್ ಅವರು ಹೂಗಳಿಂದ ಅಲಂಕೃತವಾಗಿದ್ದ ದ್ರೌಪದಿ ಕರಗವನ್ನು (ಕಳಸ) ಹೊತ್ತುಕೊಂಡು ನಗರದ ವಿವಿಧ ಬೀದಿಗಳಲ್ಲಿ ಸಾಗಿದರು.

ಇದಕ್ಕೂ ಮೊದಲು ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ಹಲವು ಗಣ್ಯರು ಭಾಗವಹಿಸಿ ಸುಮಾರು 12 ಕಿ.ಮೀ ದೂರ ಕ್ರಮಿಸಿದ ‘ಕರಗ ಶಕ್ತ್ಯೋತ್ಸವ’ ಮೆರವಣಿಗೆಗೆ ಚಾಲನೆ ನೀಡಿದರು. ಕಂದು ಬಣ್ಣದ ಮೇಲ್ವಸ್ತ್ರ ಮತ್ತು ಬಿಳಿಯ ಬಣ್ಣದ ಪ್ಯಾಂಟ್ ಧರಿಸಿದ್ದ ‘ವೀರಕುಮಾರರು’ ಕತ್ತಿಯ ಸಮೇತ ಮೆರವಣಿಗೆಯುದ್ದಕ್ಕೂ ಘೋಷಣೆ ಕೂಗುತ್ತಾ ಮುನ್ನಡೆದರು.

ತಿಗಳರ ಪೇಟೆಯಿಂದ ಆರಂಭವಾದ ಮೆರವಣಿಗೆ ನಗರ್ತಪೇಟೆ, ಕಬ್ಬನ್‌ಪೇಟೆ, ಆಂಜನೇಯಸ್ವಾಮಿ ದೇವಸ್ಥಾನ, ಚಿಕ್ಕಪೇಟೆ ವೃತ್ತ, ಸಿಟಿ ಮಾರುಕಟ್ಟೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕಾಟನ್‌ಪೇಟೆ, ಮಸ್ತಾನ್ ಸಾಹೇಬರ ದರ್ಗಾ, ಅಣ್ಣಮ್ಮ ದೇವಸ್ಥಾನ, ಅವಿನ್ಯೂ ರಸ್ತೆ, ತಿಗಳರಪೇಟೆ ಮುಂತಾದೆಡೆ ಸಾಗಿ ಬೆಳಗಿನ ಜಾವ ದೇವಸ್ಥಾನಕ್ಕೆ ವಾಪಸಾಯಿತು.

ಧರ್ಮರಾಯಸ್ವಾಮಿ ದೇವಸ್ಥಾನದ ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ವಿವಿಧ ದೇವತೆಗಳ ಚಿತ್ರಗಳನ್ನು ದೀಪಗಳಲ್ಲಿ ಸೃಷ್ಟಿಸಲಾಗಿತ್ತು. ನಗರದ ವಿವಿಧ ಭಾಗಗಳಷ್ಟೇ ಅಲ್ಲದೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಸಹಸ್ರಾರು ಭಕ್ತರು ಕರಗವನ್ನು ಸಾಕ್ಷೀಕರಿಸಿದರು.

ಧರ್ಮರಾಯಸ್ವಾಮಿ ಮತ್ತು ದ್ರೌಪದಿಯನ್ನು ಸ್ಮರಿಸಿ ವಿವಿಧ ಘೋಷಣೆಗಳನ್ನು ಕೂಗುತ್ತಿದ್ದಾಗಲೇ ಮೆರವಣಿಗೆಯಲ್ಲಿ ತೆರಳುತ್ತಿದ್ದ ಭಕ್ತರಿಗೆ ಅಲ್ಲಿನ ನಾಗರಿಕರು ಮತ್ತು ಅಂಗಡಿಗಳ ಮಾಲೀಕರು ಪೊಂಗಲ್, ಮೊಸರನ್ನ, ದೋಸೆ, ಬಿಸಿ ಬೇಳೆ ಬಾತ್ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ನೀಡಿ ಹಸಿವು ತಣಿಸಿದರು.

ಸೋಮವಾರ ಬೆಳಿಗ್ಗೆ ವೀರಕುಮಾರರು ಮತ್ತು ಭಕ್ತರ ಸಮ್ಮುಖದಲ್ಲಿ ಲೋಕೇಶ್ ಅವರು ಕಬ್ಬನ್ ಉದ್ಯಾನದ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಮೈಗೆ ಭಂಡಾರ (ಅರಿಶಿಣ) ಹಚ್ಚಿಕೊಂಡಿದ್ದ ಅವರು ಕರಗದ ಸಂದರ್ಭದಲ್ಲಿ ಬಳಸಿದ ಪರಿಕರಗಳಿಗೆ ಪೂಜೆ ಸಲ್ಲಿಸಿದರು. ನಂತರ ಹೊಂಗೆಮರದ ಸೊಪ್ಪನ್ನು ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ತಂದು ಚಪ್ಪರ ಹಾಕಿದರು. ಪ್ರತೀತಿಯಂತೆ ಅಲ್ಲಿ ಧರ್ಮರಾಯ ಮತ್ತು ದ್ರೌಪದಿಗೆ ಮದುವೆಯನ್ನೂ ಮಾಡಲಾಯಿತು.

ಕರಗ ಹೊರುವವರು ಹತ್ತು ದಿನಗಳ ಮುಂಚೆಯೇ ಮನೆಯನ್ನು ತ್ಯಜಿಸಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲೇ ವಾಸ ಮಾಡಬೇಕಿರುವುದು ಕಡ್ಡಾಯ. ಪ್ರತಿದಿನ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುವ ಅವರೇ ಕರಗದ ದಿನದಂದು ದ್ರೌಪದಿಯ ರೂಪವನ್ನು ಧರಿಸುತ್ತಾರೆ ಎಂಬ ನಂಬಿಕೆಯಿದೆ.

ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತಗಳನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ. ಸಂಸದ ಅನಂತಕುಮಾರ್, ಶಾಸಕರಾದ ಡಾ.ಡಿ.ಹೇಮಚಂದ್ರ ಸಾಗರ್, ನೆ.ಲ.ನರೇಂದ್ರಬಾಬು, ಅರವಿಂದ ಲಿಂಬಾವಳಿ, ಮೇಯರ್ ಎಸ್.ಕೆ. ನಟರಾಜ್, ಧರ್ಮರಾಯಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷೆ ಇಂದಿರಾ ಮತ್ತಿತರರು ಕರಗ ಉತ್ಸವದಲ್ಲಿ ಪಾಲ್ಗೊಂಡಿದ್ದರು.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.