ADVERTISEMENT

ಸಂಸ್ಕೃತಿ ರಕ್ಷಣೆಗೆ ಮಠಾಧೀಶರು ಒಗ್ಗೂಡಿ

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 20:01 IST
Last Updated 18 ಏಪ್ರಿಲ್ 2013, 20:01 IST

ಬೆಂಗಳೂರು: `ಭಾರತೀಯ ಸಂಸ್ಕೃತಿ ಹಾಗೂ ಧರ್ಮ ಸಂರಕ್ಷಣೆಗೆ ಮಠಾಧೀಶರು ಅಭಿಪ್ರಾಯಭೇದ ಮರೆತು ಒಗ್ಗಟ್ಟಾಗಿ ವೇದಿಕೆ ಸ್ಥಾಪಿಸಿ ಕಾರ್ಯಾಚರಿಸಬೇಕು' ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಭಾರತೀಯ ಸಾಂಸ್ಕೃತಿಕ ಪರಿಷತ್ ಆಶ್ರಯದಲ್ಲಿ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಭಾರತೀಯ ಸಂಸ್ಕೃತಿ ದರ್ಶನ' (ಸಂಪಾದಕ-ಡಾ. ಪಿ.ಎಸ್. ರಾಮಾನುಜಂ) ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

`ಈ ವೇದಿಕೆ ಮೂಲಕ ಹಲವು ಕೋಟಿ ರೂಪಾಯಿಯ ನಿಧಿ ಸ್ಥಾಪಿಸಬೇಕು. ಮಠದ ಸಾವಿರಾರು ಶಿಷ್ಯರನ್ನು ಹಳ್ಳಿ, ಗುಡ್ಡಗಾಡು ಪ್ರದೇಶ, ಕೊಳೆಗೇರಿಗಳಿಗೆ ಕಳುಹಿಸಿ ಧರ್ಮ ಪ್ರಸಾರ ಮಾಡಬೇಕು. ಆಗ ಮಾತ್ರ ಸಂಸ್ಕೃತಿ ರಕ್ಷಣೆ ಮಾಡಲು ಸಾಧ್ಯ' ಎಂದರು.

ಆರ್ಥಿಕ ಹಾಗೂ ಅಧಿಕಾರ ವಿಕೇಂದ್ರೀಕರಣದ ಮಾದರಿಯಲ್ಲೇ ಸಂಸ್ಕೃತಿಯ ವಿಕೇಂದ್ರೀಕರಣ ಮಾಡಬೇಕು. ತಳಸ್ತರದ ಜನರಾದ ಗುಡ್ಡಗಾಡು ಹಾಗೂ ಕೊಳೆಗೇರಿ ಪ್ರದೇಶದ ಜನರಿಗೆ ಶ್ರೇಷ್ಠ ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದರು.

ಜಾತಿ ಸಂಘರ್ಷ ಹಾಗೂ ಅಸ್ಪೃಶ್ಯತೆಯಿಂದ ನಮ್ಮ ಸಂಸ್ಕೃತಿ ಮೇಲೆ ಆಂತರಿಕ ಆಘಾತ ಉಂಟಾಗುತ್ತಿದೆ. ಪಾಶ್ವಾತ್ಯ ಸಂಸ್ಕೃತಿ ಪ್ರಭಾವ, ಮತಾಂತರ, ಅಲ್ಪಸಂಖ್ಯಾತರು-ಬಹುಸಂಖ್ಯಾತರ ಮೇಲೆ ರಾಜಕೀಯ ಪಕ್ಷಗಳ ಪಕ್ಷಪಾತ ನೀತಿಯ ಮೂಲಕ ಸಂಸ್ಕೃತಿ ಮೇಲೆ ದಾಳಿ ನಡೆಸಲಾಗುತ್ತಿದೆ. ವಿವಿಧ ಜಾತಿ ಧರ್ಮದ ಅನುಯಾಯಿಗಳು ಒಂದಾದರೆ ಸಂಸ್ಕೃತಿ ರಕ್ಷಣೆ ಸಾಧ್ಯ ಎಂದರು.

ಕೃತಿ ಬಿಡುಗಡೆ ಮಾಡಿದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜಿ ಮಹಾರಾಜ್ ಮಾತನಾಡಿ, ಹಿಂದೂ ಸಮಾಜದ ರಕ್ಷಣೆ ಹಾಗೂ ಉದ್ಧಾರಕ್ಕೆ ದೇವಸ್ಥಾನ ಹಾಗೂ ಮಠಾಧೀಶರು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿ ಒಕ್ಕೂಟ ರಚಿಸಬೇಕು ಎಂದು ಸಲಹೆ ನೀಡಿದರು.

`ಆಂಗ್ಲ ಸಂಸ್ಕೃತಿಯ ಪ್ರಭಾವದಿಂದಾಗಿ ನಮ್ಮ ಸಂಸ್ಕೃತಿ ನಾಶವಾಗುತ್ತಿದೆ. ಇಂದು ಜ್ಞಾನ ಕ್ರಾಂತಿ ಹಾಗೂ ರಾಷ್ಟ್ರೀಯ ಭಾವೈಕ್ಯದ ಅವಶ್ಯಕತೆ ಇದೆ. ಮತಾಂತರದಿಂದ ದೇಶಕ್ಕೆ ಗಂಡಾಂತರ ಬಂದಿದೆ. ಚರಿತ್ರೆಯನ್ನು ತಿರುಚಲಾಗಿದೆ. ಈ ಎಲ್ಲ ಅಂಶಗಳ ಬಗ್ಗೆ ಈ ಕೃತಿಯಲ್ಲಿ ಬೆಳಕು ಚೆಲ್ಲಲಾದೆ' ಎಂದು ವಿಶ್ಲೇಷಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, `ದೇಶದ ಎಲ್ಲ ಧರ್ಮಗುರುಗಳು ಸಂಘಟಿತರಾಗಿ ಸಂಸ್ಕೃತಿ ರಕ್ಷಣೆಗೆ ಮುಂದಾದರೆ ಅನೇಕ ಅನಾಹುತಗಳನ್ನು ತಡೆಗಟ್ಟಲು ಸಾಧ್ಯ. ಆದರೆ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ಆಸಕ್ತಿ ತೋರದೆ ಇರುವುದೇ ದೊಡ್ಡ ಸಮಸ್ಯೆ' ಎಂದು ಬೇಸರ ವ್ಯಕ್ತಪಡಿಸಿದರು.

ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಅಖಂಡ ಭಾರತವನ್ನು ಕಳೆದಿಕೊಂಡಿದ್ದೇವೆ. ಅಖಂಡ ಮನಸ್ಸುಗಳು ಇನ್ನೂ ಉಳಿದಿವೆ. ಈ ಮನಸ್ಸುಗಳು ನಮ್ಮ ಶ್ರೇಷ್ಠ ಸಂಸ್ಕೃತಿ ಹಾಗೂ ಪರಂಪರೆಯನ್ನು ಯುವಜನರಿಗೆ ಅರಿವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.

ವಿಜಾಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ, ಆನಂದಪುರ ಮುರುಘರಾಜೇಂದ್ರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ಕೃತಿಯ ಸಂಪಾದಕ ಡಾ.ಪಿ.ಎಸ್.ರಾಮಾನುಜಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.