ADVERTISEMENT

ಸಕಾಲ ವ್ಯಾಪ್ತಿಗೆ ಇನ್ನೂ 32 ಸೇವೆ: ಚಿಂತನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST
ಸಕಾಲ ವ್ಯಾಪ್ತಿಗೆ ಇನ್ನೂ 32 ಸೇವೆ: ಚಿಂತನೆ
ಸಕಾಲ ವ್ಯಾಪ್ತಿಗೆ ಇನ್ನೂ 32 ಸೇವೆ: ಚಿಂತನೆ   

ಯಲಹಂಕ: `ಸಕಾಲ~ ಯೋಜನೆ ವ್ಯಾಪ್ತಿಗೆ ಹೆಚ್ಚುವರಿಯಾಗಿ ಇನ್ನೂ 32 ನೂತನ ಸೇವೆಗಳನ್ನು ಸೇರ್ಪಡೆ ಮಾಡಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಕಾಲ ಮಿಷನ್‌ನ ನಿರ್ದೇಶಕಿ ಡಾ. ಶಾಲಿನಿ ರಜನೀಶ್ ಹೇಳಿದರು.

ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಹಯೋಗದೊಂದಿಗೆ ಜಕ್ಕೂರಿನ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಬಳಕೆದಾರರ ವೇದಿಕೆ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಈಗಾಗಲೇ ಈ ಯೋಜನೆಯಡಿ 151 ಸೇವೆಗಳನ್ನು ನೀಡಲಾಗುತ್ತಿದೆ. ನಾಗರಿಕರ ಬೇಡಿಕೆಗಳಿಗೆ ಅನುಗುಣವಾಗಿ ನೂತನ ಸೇವೆಗಳನ್ನು ಸೇರ್ಪಡೆಗೊಳಿಸುವ ಸಂಬಂಧ ಬೇರೆ ಬೇರೆ ಇಲಾಖೆಗಳ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವ ಮೂಲಕ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ನಾಗರಿಕರಿಗೆ ಈ ಯೋಜನೆಯಡಿ ನೂತನ ಸೇವೆಗಳನ್ನು ಒದಗಿಸಲಾಗುವುದು~ ಎಂದು ತಿಳಿಸಿದರು.

`ಸಕಾಲ~ ಯೋಜನೆಯಡಿ ಇದುವರೆಗೆ ಸಲ್ಲಿಕೆಯಾದ 32 ಲಕ್ಷ ಅರ್ಜಿಗಳ ಪೈಕಿ 25 ಲಕ್ಷ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡಲಾಗಿದೆ. ಅರ್ಜಿಗಳ ವಿಲೇವಾರಿಯಲ್ಲಿ ಅಂತಹ ವಿಳಂಬವೇನೂ ಆಗುತ್ತಿಲ್ಲ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಶೇ 1.1ರಷ್ಟು ಅರ್ಜಿಗಳು ಮಾತ್ರ ವಿಲೇವಾರಿಗೆ ಬಾಕಿ ಉಳಿದಿವೆ~ ಎಂದು ಮಾಹಿತಿ ನೀಡಿದರು.

ಸಿಬ್ಬಂದಿ, ಹಣಕಾಸಿನ ಕೊರತೆ ಇಲ್ಲ:
`ಸಕಾಲ~ ಯೋಜನೆ ಅನುಷ್ಠಾನಕ್ಕೆ ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆಯಿಲ್ಲ. ಪೂರ್ಣಪ್ರಮಾಣದ ಸಿಬ್ಬಂದಿ ಇಲ್ಲದ ಕಡೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕಂಪ್ಯೂಟರ್ ಖರೀದಿ ಮತ್ತಿತರ ವ್ಯವಸ್ಥೆಗಳಿಗಾಗಿ ಸರ್ಕಾರ ಈಗಾಗಲೇ 5 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಅದರಲ್ಲಿ 4.5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇದಲ್ಲದೆ, ಹೆಚ್ಚುವರಿಯಾಗಿ ಇನ್ನೂ ಐದು ಕೋಟಿ ರೂಪಾಯಿ ಮಂಜೂರು ಮಾಡಿದೆ ಎಂದರು.

ಬಿಡಿಎ ಆಯುಕ್ತ ಪ್ರದೀಪ್‌ಸಿಂಗ್ ಕರೋಲ, ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಶ್ರೀಧರ ಪಬ್ಬಿಶೆಟ್ಟಿ, ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಆರ್.ಕರ್ಕಿ ಉಪಸ್ಥಿತರಿದ್ದರು.

ಅಂಚೆ ಮೂಲಕ ನಾಗರಿಕ ಸೇವೆ..

ದಾಖಲೆ ಹಾಗೂ ಶುಲ್ಕ ಅವಶ್ಯಕತೆಯಿಲ್ಲದ ನಾಗರಿಕ ಸೇವೆಯನ್ನು ನೋಂದಾಯಿತ ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು  `ಸಕಾಲ~ ಯೋಜನೆಯಡಿ ತರಲು ಉದ್ದೇಶಿಸಲಾಗಿದೆ ಎಂದು ಶಾಲಿನಿ ರಜನೀಶ್ ತಿಳಿಸಿದರು.

ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿಯನ್ನು ಅಂಚೆ ಮೂಲಕ ಕಳುಹಿಸುವ ರೀತಿ ಸಕಾಲ ಸೇವೆಯನ್ನೂ ಒದಗಿಸಲು ಸಾಧ್ಯವಿಲ್ಲವೇ ಎಂದು ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಸಕಾಲ ಸೇವೆ ಪಡೆಯಬೇಕಿದ್ದಲ್ಲಿ ಕೆಲವು ದಾಖಲೆಗಳನ್ನು ಸಾರ್ವಜನಿಕರು ಸಲ್ಲಿಸಬೇಕಾಗಿರುವುದರಿಂದ ದಾಖಲೆ ಹಾಗೂ ಶುಲ್ಕದ ಅಗತ್ಯವಿಲ್ಲದ ಸೇವೆಯನ್ನು ಅಂಚೆ ಮೂಲಕ ಒದಗಿಸುವ ವ್ಯವಸ್ಥೆ ಮಾಡಬಹುದಾಗಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.