ADVERTISEMENT

ಸಚಿವ ಶೆಟ್ಟರ್‌ಗೆ ಸಮನ್ಸ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:55 IST
Last Updated 2 ಜನವರಿ 2012, 19:55 IST

ಬೆಂಗಳೂರು: ಕೆಜಿಎಫ್ ಶಾಸಕ ವೈ.ಸಂಪಂಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಿರುವ ಬಗ್ಗೆ ಸಾಕ್ಷ್ಯ ನುಡಿಯಲು ಬರುವಂತೆ ವಿಧಾನಸಭೆಯ ಹಿಂದಿನ ಸ್ಪೀಕರ್, ಹಾಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ್ ಅವರಿಗೆ ಸಮನ್ಸ್ ಜಾರಿ ಮಾಡುವಂತೆ ಲೋಕಾಯುಕ್ತ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ಉದ್ಯಮಿ ಹುಸೇನ್ ಮೊಯಿನ್ ಫಾರೂಕ್ ಅವರಿಂದ ಸಂಪಂಗಿ ಅವರು ಐದು ಲಕ್ಷ ರೂಪಾಯಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನಗರದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ, ಇಬ್ಬರು ಸಾಕ್ಷಿಗಳ ಪಾಟಿಸವಾಲು ಆಲಿಸಿತು. ವಿಧಾನಸಭಾಧ್ಯಕ್ಷರಾಗಿದ್ದ ಶೆಟ್ಟರ್ ಅವರು ಸಂಪಂಗಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಿದ್ದರು. ಈ ಸಂಬಂಧ ಅವರನ್ನೂ ವಿಚಾರಣೆ ನಡೆಸಲು ನಿರ್ಧರಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ವಿಚಾರಣೆಗೆ ಹಾಜರಾಗುವಂತೆ ಶೆಟ್ಟರ್ ಅವರಿಗೆ ಸಮನ್ಸ್ ಜಾರಿ ಮಾಡುವಂತೆ ಆದೇಶಿಸಿದರು.

2009ರ ಜನವರಿಯಲ್ಲಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಶಾಸಕರ ಭವನದಲ್ಲಿ ಸಂಪಂಗಿ ಅವರನ್ನು ಬಂಧಿಸಿದ ಸಂದರ್ಭದಲ್ಲಿ ಅವರ ಜೊತೆಗಿದ್ದ ಅಂಗರಕ್ಷಕ ಪದ್ಮನಾಭಯ್ಯ ಮತ್ತು ಪ್ರಕರಣದ ಮಹಜರು ಸಾಕ್ಷಿಯಾಗಿದ್ದ ನಾಗರಾಜ್ ಅವರ ಪಾಟಿಸವಾಲು ಸೋಮವಾರ ನಡೆಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳಿಗೆ ಇಬ್ಬರೂ ಉತ್ತರಿಸಿದರು.

ಎಸ್‌ಪಿಪಿ ನೇಮಕ: ಸಂಪಂಗಿ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪರ ನೂತನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ನೇಮಕ ಮಾಡಲಾಗಿದೆ. ವಕೀಲರಾದ ಉಮಾಕಾಂತನ್ ಈ ಪ್ರಕರಣದಲ್ಲಿ ಲೋಕಾಯುಕ್ತ ಪರ ವಾದಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.