ADVERTISEMENT

ಸದಾನಂದಗೌಡ, ರಿಜ್ವಾನ್‌ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:42 IST
Last Updated 20 ಮಾರ್ಚ್ 2014, 19:42 IST

ಬೆಂಗಳೂರು:  ಬಿಜೆಪಿಯ ಡಿ.ವಿ.ಸದಾ­ನಂದ ಗೌಡ, ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಸೇರಿ ಒಟ್ಟು ಐದು ಮಂದಿ ಗುರುವಾರ ನಗರದಲ್ಲಿ ನಾಮಪತ್ರ ಸಲ್ಲಿಸಿದರು. 

ಬೆಂಗಳೂರು ಉತ್ತರ: ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಿ.ವಿ.ಸದಾ­ನಂದ ಗೌಡ ನಾಮಪತ್ರ ಸಲ್ಲಿಸಿದರು. ಬೆಳಿಗ್ಗೆ ಪತ್ನಿ ಡಾಟಿ ಸಮೇತ ಸಂಜಯ­ನಗರದ ರಾಧಾಕೃಷ್ಣ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.ನಂತರ ಬೆಂಗಳೂರು ನಗರ ಜಿಲ್ಲಾಧಿ­ಕಾರಿ ಕಚೇರಿಗೆ ಬೆಂಬಲಿ­ಗರ ಜತೆ ತೆರಳಿ ನಾಮಪತ್ರ ಸಲ್ಲಿಸಿದರು.

ಮುಖಂಡರಾದ ಅನಂತಕುಮಾರ್‌, ಆರ್‌.ಅಶೋಕ, ಡಾ.ಸಿ.ಎನ್‌.-­ಅಶ್ವತ್ಥ­ನಾರಾ­ಯಣ, ಎಸ್‌.ಮುನಿರಾಜು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವೈ.ಎ.ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಬೆಂಗಳೂರು ಕೇಂದ್ರ: ಬುಧವಾರ ಸಂಜೆಯೇ ಮೈಸೂರು ಬ್ಯಾಂಕ್‌ ವೃತ್ತದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದ ರಿಜ್ವಾನ್‌, ಗುರುವಾರ ಬೆಳಿಗ್ಗೆ ಕಾಟನ್‌ ಪೇಟೆಯಲ್ಲಿರುವ ತವಕ್ಕಲ್‌ ಮಸ್ತಾನ್‌ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಮಧ್ಯಾಹ್ನ 12.30ಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ್‌, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಆರ್‌.ವಿ.ವೆಂಕಟೇಶ್, ಶಾಸಕ ಎನ್‌.ಎ.ಹ್ಯಾರಿಸ್‌ ಅವರೊಂದಿಗೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣಕ್ಕೆ ಬಂದು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ರಿಜ್ವಾನ್‌ ಕೆಲ ದೂರದವರೆಗೆ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ಮೆರವಣಿಗೆಯಲ್ಲಿ ಬಂದರು. ನಾಮಪತ್ರ ಸಲ್ಲಿಕೆ ನಂತರ ಪಾಲಿಕೆ ಕಚೇರಿ ಆವರಣದಲ್ಲಿನ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರಳಿದರು.
ಬೆಂಗಳೂರು ದಕ್ಷಿಣ: ಈ ಕ್ಷೇತ್ರದಲ್ಲಿ ಡಾ.ಕಡೂರ ವೆಂಕಟೇಶ, ಡಾ.ಪ್ರದೀಪ್‌ ಗದುಗೇಶ್‌ ಮತ್ತು ಜಿ.ವೆಂಕಟೇಶ ಭೋವಿ ಎಂಬುವರು ಪಕ್ಷೇತರ ಅಭ್ಯರ್ಥಿ­ಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.