ADVERTISEMENT

ಸಮರ್ಪಕ ಜಲ ನಿರ್ವಹಣೆ, ವಿಫಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: `ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ಜಲ ನಿರ್ವಹಣೆ  ಮಾಡುವಲ್ಲಿ ವಿಫಲವಾಗಿವೆ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.

ಸುಸ್ಥಿರ ಅಭಿವೃದ್ಧಿ ಕೇಂದ್ರ (ಸಿಎಸ್‌ಡಿ) ನಗರದಲ್ಲಿ ಬುಧವಾರ ಏರ್ಪಡಿಸಿದ್ದ `ಬೆಂಗಳೂರು ವಿಶ್ವ ಜಲ ಸಮ್ಮೇಳನ~ ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಲ ನಿರ್ವಹಣೆ ಸರಿಯಾಗ ಮಾಡದ ಕಾರಣ ಹೆಚ್ಚಿನ ಸಮಸ್ಯೆಗಳಾಗುತ್ತಿವೆ. ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ಜಲ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕು. ನೀರಿನ ಮಹತ್ವದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಪರಿಸರ ಮತ್ತು ಅರಣ್ಯ ರಕ್ಷಣೆಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.

ADVERTISEMENT

`ಯೂರೋಪಿಯನ್ ದೇಶಗಳಲ್ಲಿ ಜಲ ಮತ್ತು ಗಾಳಿಯನ್ನೂ ನಿರ್ವಹಣೆ ಮಾಡಲಾಗುತ್ತದೆ. ಆದರೆ ಅಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಪರಿಸರ ನಾಶದಿಂದಾಗಿ ನದಿಗಳು ಬತ್ತಿ ಹೋಗಿರುವುದನ್ನು ನೋಡಬಹುದು. ಉತ್ತರ ಭಾರತದ ಕೆಲ ಪ್ರಮುಖ ನದಿಗಳೇ ಇಂದು ಬತ್ತಿ ಹೋಗಿವೆ. ಹಿಂದೆ ಪರಿಸರ ಸಮತೋಲನದಲ್ಲಿದ್ದಾಗ ವರ್ಷಕ್ಕೆ ನಾಲ್ಕು ತಿಂಗಳು ಮಳೆಯಾಗುತ್ತಿತ್ತು. ಆದರೆ ಈಗ ಮಳೆಯ ಪ್ರಮಾಣವೇ ಕಡಿಮೆಯಾಗಿದೆ. ಆದ್ದರಿಂದ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು~ ಎಂದು ಅವರು ಹೇಳಿದರು.

`ಜಲ ಮೂಲವನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಅಗತ್ಯ ಅಥವಾ ಅನಿವಾರ್ಯ ಎಂಬ ಸಂದರ್ಭದಲ್ಲಿ ಮಾತ್ರ ಜಲ ನಿರ್ವಹಣೆಯನ್ನು ಖಾಸಗಿ ಅವರಿಗೆ ವಹಿಸಬಹುದು~ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್. ರಾಜೇಂದ್ರ ಬಾಬು ಅವರು ಅಭಿಪ್ರಾಯಪಟ್ಟರು.

ಪ್ರಶಸ್ತಿ: ನೀರು ನಿರ್ವಹಣೆಯಲ್ಲಿ ಸಾಧನೆ ಮಾಡಿದ ಪ್ರಶಸ್ತಿ ಪಡೆದ ಸಂಸ್ಥೆಗಳ ಹೆಸರು ಈ ಕೆಳಕಂಡಂತಿದೆ.
ಅತ್ಯುತ್ತಮ ಪ್ರಶಸ್ತಿ- ಬೆಳಗಾವಿ ನಗರ ಪಾಲಿಕೆ; ಶ್ರೇಷ್ಠ ಪ್ರಶಸ್ತಿ- ಮೈಸೂರು ನಗರ ಪಾಲಿಕೆ; ಮೆಚ್ಚುಗೆ: ಪುತ್ತೂರು ಪುರಸಭೆ, ಉಲ್ಲಾಳ ಪುರಸಭೆ; ಮೂಡಬಿದಿರೆ ಪುರಸಭೆ.

ಕರ್ನಾಟಕ ಹೊರತುಪಡಿಸಿ: ವಿಶೇಷ ಮಾನ್ಯತೆ ಪ್ರಶಸ್ತಿ- ನವಿ ಮುಂಬೈ; ಜಗ್ತಿಯಾಲ್ ನಗರ ಸಭೆ, ಆಂಧ್ರಪ್ರದೇಶ;

ಸರ್ಕಾರೇತರ ಸಂಸ್ಥೆಗಳು: ಅತ್ಯುತ್ತಮ ಪ್ರಶಸ್ತಿ- ಎಕೋಸಾನ್, ಪುಣೆ; ಶ್ರೇಷ್ಠ ಪ್ರಶಸ್ತಿ- ಪ್ರಯಾಸ್ ಪುಣೆ.

ಕೈಗಾರಿಕೆಗಳು:  ಅತ್ಯುತ್ತಮ ಪ್ರಶಸ್ತಿ- ಬಿಐಎಎಲ್; ಶ್ರೇಷ್ಠ ಪ್ರಶಸ್ತಿ- ಇನ್ಫೋಸಿಸ್ ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.