ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಕೃಷಿ ಕ್ಷೇತ್ರದಿಂದ ವಲಸೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:10 IST
Last Updated 5 ಅಕ್ಟೋಬರ್ 2012, 19:10 IST

ಬೆಂಗಳೂರು: `ಹವಾಮಾನ ವೈಪರೀತ್ಯ, ಮಳೆ ಕೊರತೆ, ಅಂತರ್ಜಲ ಮಟ್ಟ ಕುಸಿತ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಎದುರಾಗಿರುವ ಅನೇಕ ಸಮಸ್ಯೆಗಳಿಂದಾಗಿ ಈ ಕ್ಷೇತ್ರ ಸಂಕಷ್ಟವನ್ನು ಎದುರಿಸುತ್ತಿದೆ. ಈ ಎಲ್ಲ ಸಮಸ್ಯೆಗಳಿಂದಾಗಿ ಕೃಷಿ ಕ್ಷೇತ್ರದಿಂದ ವಲಸೆ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ತೀರಾ ಹೆಚ್ಚಾಗಿದೆ~ ಎಂದು ನವದೆಹಲಿಯ ಕೃಷಿ ವಿಜ್ಞಾನಿಯ ನೇಮಕಾತಿ ಮಂಡಳಿಯ ಅಧ್ಯಕ್ಷ ಡಾ.ಗುರುಬಚನ್ ಸಿಂಗ್ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಕೃಷಿ ಕ್ಷೇತ್ರದ ಸುಧಾರಣೆಗೆ ಕೃಷಿ ಅಧಿಕಾರಿಗಳು, ವಿಜ್ಞಾನಿಗಳು, ವಿಸ್ತರಣಾ ಕ್ಷೇತ್ರದ ಅಧಿಕಾರಿಗಳು, ಸ್ವಯಂಸೇವಾ ಸಂಘಟನೆಗಳು ಪರಸ್ಪರ ಸಹಕಾರದಿಂದ ತಳಮಟ್ಟದಿಂದಲೇ ಕಾರ್ಯನಿರ್ವಹಿಸುವ ಅಗತ್ಯ ಇದೆ. ಈಗ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೆ ದೇಶದ ಶ್ರೇಷ್ಠ ಸಂಪತ್ತು ಆಗಿರುವ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ~ ಎಂದು ಅವರು ಅಭಿಪ್ರಾಯಪಟ್ಟರು.

`ಕೃಷಿಕರಿಗೆ ಜೀವನ ಭದ್ರತೆ ಒದಗಿಸುವ ಅಗತ್ಯ ಇದೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಭೂಮಿಗಳು ಕೃಷಿಯೇತರ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಕೃಷಿ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು ನಿರಾಶದಾಯಕವಾಗಿದ್ದರೂ ಧೃತಿಗೆಡುವ ಅಗತ್ಯ ಇಲ್ಲ. ಸಂಶೋಧನೆ ಹಾಗೂ ತಂತ್ರಜ್ಞಾನದ ನೆರವಿನಿಂದ ಈ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಿದೆ~ ಎಂದರು.

ಕೃಷಿ ವಿವಿ ಕುಲಪತಿ ಡಾ.ಕೆ.ನಾರಾಯಣ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, `ವಿವಿಯಲ್ಲಿ ಶಿಕ್ಷಣ ಗುಣಮಟ್ಟದ ಹೆಚ್ಚಳಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಗ್ರಾಮೀಣ ಪರಿಸರದ ಅರಿವು ಪಡೆಯಲು ವಿದ್ಯಾರ್ಥಿಗಳಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಮೂರು ತಿಂಗಳ ತರಬೇತಿ ಕೊಡಿಸಲಾಗುತ್ತಿದೆ~ ಎಂದರು.

`1970-75ರಲ್ಲಿ ಕೃಷಿ ವಿಜ್ಞಾನ ಪದವಿ ಪಡೆಯುವ ವಿದ್ಯಾರ್ಥಿನಿಯರ ಸಂಖ್ಯೆ ಬೆರಳೆಣಿಕೆಯಷ್ಟು ಇತ್ತು. ಈಗ ವಿವಿಯಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಶೇ 52.2ರಷ್ಟಿದೆ.

ಎರಡು ವರ್ಷಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಶೇ 60ಕ್ಕೆ ಹೆಚ್ಚುವ ನಿರೀಕ್ಷೆ ಇದೆ~ ಎಂದು ಅವರು ತಿಳಿಸಿದರು.
ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಿ.ಕೆ.ವಸಂತ ಕುಮಾರ್, ಕೃಷಿ ವಿವಿ ಕುಲಸಚಿವ ಡಾ. ನಂಜಪ್ಪ ಉಪಸ್ಥಿತರಿದ್ದರು.

ಪ್ರಶಸ್ತಿ ಪಡೆದವರು

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಡಾ.ಎಸ್.ಎಸ್.ಪ್ರಕಾಶ್,
ಡಾ.ಎನ್.ಬಿ. ಪ್ರಕಾಶ್, ಡಾ.ಎಚ್.ಚಿದಾನಂದಪ್ಪ, ಡಾ.ಬಿ.ಎಸ್.ಶ್ರೀರಾಮು, ಡಾ.ಬಿ.ಚಿನ್ನಪ್ಪ 
ನಟಸಾರ್ವಭೌಮ ಡಾ.ರಾಜ್‌ಕುಮಾರ್ ಸನ್ಮಾನ ಸಮಿತಿ ಪ್ರಶಸ್ತಿ
ಡಾ.ಎಚ್.ಸಿ.ಲೋಹಿತಾಶ್ವ
ನಾಗಮ್ಮ ದತ್ತಾತ್ರೇಯ ರಾವ್ ದೇಸಾಯಿ ಪ್ರಶಸ್ತಿ ಡಾ.ಹನುಮೇಗೌಡ ಸಂಜೀವಯ್ಯ ಶಿವರಾಮು
ಡಾ.ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಪ್ರಶಸ್ತಿಡಾ.ಎಸ್.ರಾಜೇಂದ್ರ ಪ್ರಸಾದ್
ಅತ್ಯುತ್ತಮ ಕ್ಷೇತ್ರ ಅಧೀಕ್ಷಕ ಪ್ರಶಸ್ತಿ-
ಡಾ.ಪಾಂಡುರಂಗ
ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಡಾ.ಎಚ್.ಕೆ.ವೀರಣ್ಣ 
ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ
ಬಿ.ಜಿ.ಪ್ರದೀಪ್, ಡಿ.ಎನ್.ವೆಂಕಟಪ್ಪ
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.