ADVERTISEMENT

ಸಮಾಜವನ್ನು ತಿದ್ದಲು ಲಿಂಗದೇವರು ಬದುಕಬೇಕಿತ್ತು

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಬೆಂಗಳೂರು: `ಸಮಾಜದ ಅಂಕು-ಡೊಂಕುಗಳನ್ನು ಅಂಕಣ ಬರಹಗಳ ಮೂಲಕ ತಿದ್ದಲು ಪತ್ರಕರ್ತ ಲಂಕೇಶ್, ವಿಚಾರವಾದಿ ಕೆ. ರಾಮದಾಸ್ ಹಾಗೂ ಡಾ. ಲಿಂಗದೇವರು ಹಳಮನೆಯಂಥವರು ಇನ್ನಷ್ಟು ಕಾಲ ನಮ್ಮಡನೆ ಬಾಳಿ ಬದುಕಿರಬೇಕಿತ್ತು~ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಬುಧವಾರ ಇಲ್ಲಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಕೆಂಪೇಗೌಡ ಬಸ್ ನಿಲ್ದಾಣದ ಸಾಂಸ್ಕೃತಿಕ ಕಲಾಕುಟೀರದಲ್ಲಿ ಹಮ್ಮಿಕೊಂಡಿದ್ದ ರಂಗಕರ್ಮಿ ದಿವಂಗತ ಡಾ.ಲಿಂಗದೇವರು ಹಳೆಮನೆ ಅವರ ಶ್ರದ್ಧಾಂಜಲಿ ಸಭೆಯಲ್ಲಿ  ಅವರು ಮಾತನಾಡಿದರು.

`ಪ್ರಸ್ತುತ ಸಾಂಸ್ಕೃತಿಕ ರಾಜಕಾರಣದ ದಾರಿದ್ರ್ಯತನದ ವಾತಾವರಣದಲ್ಲಿ ಕೊಳಕು ಮನಸ್ಸುಗಳು ವಿಜೃಂಭಿಸುತ್ತಿವೆ. ಇಂತಹ ಕೊಳಕು ಮನಸ್ಸುಗಳನ್ನು ಬಡಿಗೋಲಿನಿಂದ ಎಚ್ಚರಿಸಲು ಲಿಂಗದೇವರು ಹಳೆಮನೆ ಇನ್ನಷ್ಟು ದಿನ ನಮ್ಮಡನೆ ಇರಬೇಕಾಗಿತ್ತು. ನಮ್ಮ ಸಂಸ್ಕೃತಿ, ಸಮಾಜದ ಆರೋಗ್ಯಕರ ಬೆಳವಣಿಗೆಯ ಬಗ್ಗೆ ಕಳಕಳಿ ಹೊಂದಿದ್ದ ಹಳೆಮನೆ ಕ್ರಿಯಾಶೀಲರಾಗಿದ್ದುಕೊಂಡೇ ಅಸ್ತಂಗತರಾಗಿದ್ದು ಮಾತ್ರ ಆಘಾತಕಾರಿ ಸಂಗತಿ~ ಎಂದು ವಿಷಾದದಿಂದ ನುಡಿದರು.

`ಜಗತ್ತನ್ನು ಸುತ್ತಿದ ಲಿಂಗದೇವರು ಆಯಾ ದೇಶಗಳ ಸಂಸ್ಕೃತಿ, ಪರಂಪರೆಯನ್ನು ಅರ್ಥ ಮಾಡಿಕೊಂಡು ಕರ್ನಾಟಕದ ನೆಲ-ಜನ, ಬದುಕಿನ ಕಾರ್ಯಕ್ರೇತ್ರಕ್ಕೂ ವಿಸ್ತರಿಸಿದರು. ಜಾಗತಿಕ ವ್ಯಾಪ್ತಿಯೊಳಗೆ ಎಲ್ಲವನ್ನೂ ಮಾತನಾಡುತ್ತಿದ್ದ ಅವರು ಕನ್ನಡದ ಮಿತಿಯೊಳಗೇ ಅದನ್ನು ವಿಸ್ತರಿಸಿಕೊಂಡ ರೀತಿ ಅತ್ಯಂತ ಮಹತ್ವದ್ದು. ಹಳೆಮನೆಯವರ ಎಲ್ಲ ಬರಹಗಳಲ್ಲಿ ವಸ್ತುನಿಷ್ಠ ಸತ್ಯಾನ್ವೇಷಣೆ ಅಡಗಿತ್ತು. ಹೀಗಾಗಿ, ನಾಡೋಜ ಪ್ರಶಸ್ತಿಗೆ ಭಾಜನವಾಗುವ ಎಲ್ಲ ಅರ್ಹತೆ ಪಡೆದಿದ್ದರು~ ಎಂದು ಸಿದ್ದರಾಮಯ್ಯ ಹೇಳಿದರು.

ಹೊರೆಯಾಗದಂತೆ ಸತ್ತವರು: `62 ಸಾಯುವಂತಹ ವಯೋಮಾನವಲ್ಲ. ಯಾರ ಮನನೋಯಿಸದೆ, ಯಾರಿಗೂ ಹೊರೆಯಾಗದಂತೆ ಹಳೆಮನೆ ಸತ್ತರು. ಹೀಗಾಗಿ, ಅವರು ಅಗಲಿದಂತೆಯೇ ಅನಿಸುವುದಿಲ್ಲ. ಅವರ ವೈಚಾರಿಕ ಚಿಂತನೆಗಳು ವಾಗ್ವಾದಗಳಿಗೆ ಧಾತುವಾಗಿವೆ~ ಎಂದು ತಮ್ಮ ಗೆಳೆಯನ ಆಕಸ್ಮಿಕ ಸಾವಿನ ಬಗ್ಗೆ ಕಂಬನಿ ಮಿಡಿದರು.
ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ವೀರಣ್ಣ ಮಾತನಾಡಿ, `ಕ್ರಿಯಾಶೀಲ ಹಾಗೂ ವೈಚಾರಿಕ ಮನಸ್ಸುಳ್ಳ ವ್ಯಕ್ತಿತ್ವ ಹೊಂದಿದ್ದ ಲಿಂಗದೇವರು ಹಳೆಮನೆ ಎಲ್ಲರಿಗೂ ಬೇಕಾದ ರೀತಿ ಬಾಳಿ ಬದುಕಿದರು.

ವಿದ್ಯಾರ್ಥಿಗಳಿಗೆ ಒಬ್ಬ ಪ್ರಿಯ ಪ್ರಾಧ್ಯಾಪಕನಾಗಿ, ಸಹಪಾಠಿಗಳಿಗೆ ತುಂಬಾ ಆತ್ಮೀಯ ಹಾಗೂ ಜನಪ್ರಿಯರಾಗಿ ಬದುಕಿದ ಅವರ ಸರಳತೆ, ಸಜ್ಜನಿಕೆ ಎಲ್ಲರಿಗೂ ಆದರ್ಶಪ್ರಾಯ~ ಎಂದರು.ಕವಿ ಪ್ರೊ.ಎಲ್.ಎನ್. ಮುಕುಂದರಾಜ್ ಮಾತನಾಡಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ. ಚನ್ನೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.