ADVERTISEMENT

ಸಮಾನತೆಗಾಗಿ ಸವಿತಾ ಸಮಾಜದಲ್ಲಿ ಒಗ್ಗಟ್ಟು ಬೇಕು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಬೆಂಗಳೂರು: `ಸಾಮಾಜಿಕ ಹಾಗೂ ರಾಜಕೀಯ ಸಮಾನತೆಯ ಕಾರಣಕ್ಕಾಗಿ ಸವಿತಾ ಸಮಾಜದ ಎಲ್ಲರೂ ಒಂದಾಗಬೇಕು~ ಎಂದು ಹಾರೋಬಂಡೆಯ ಶಿವಸಾಯಿ ಬಾಬಾ ಕರೆ ನೀಡಿದರು.

ನಗರದಲ್ಲಿ ಮಂಗಳವಾರ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಆಯೋಜಿಸಿದ್ದ `ಸವಿತಾ ಮಹರ್ಷಿ ಜಯಂತಿ~ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಸಮಾಜದಲ್ಲಿ ಇಂದಿಗೂ ಸವಿತಾ ಸಮಾಜದ ಜನರು ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ. ಸಮಾಜದ ಜನರಲ್ಲಿ ಒಗ್ಗಟ್ಟಿನ ಕೊರತೆಯೇ ಇದಕ್ಕೆ ಕಾರಣ. ಹೀಗಾಗಿ ಸಮಾಜದ ಎಲ್ಲರೂ ಒಂದಾಗಬೇಕಾದ ಅನಿವಾರ್ಯವಿದೆ~ ಎಂದರು.

ಚಿಕ್ಕಬಳ್ಳಾಪುರದ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, `ರಾಜಕೀಯ ಪ್ರಾಬಲ್ಯಕ್ಕಾಗಿ ಸವಿತಾ ಸಮಾಜದ ಎಲ್ಲರೂ ಒಂದಾಗಬೇಕು. ಸರ್ಕಾರ ಸವಿತಾ ಸಮಾಜವನ್ನು ಪ್ರವರ್ಗ ಒಂದಕ್ಕೆ ಸೇರಿಸಬೇಕು. ಸವಿತಾ ಸಮಾಜದ ಜನರ ಕಲ್ಯಾಣಕ್ಕಾಗಿ ಸರ್ಕಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿಬೇಕು~ ಎಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ಟಿ.ತ್ಯಾಗರಾಜ್ ಮಾತನಾಡಿ, `ಸವಿತಾ ಸಮಾಜದಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ ಸಮಾಜದ ಜನರು ಇತರರಿಂದ ನಿರಂತರ ತುಳಿತಕ್ಕೆ ಒಳಗಾಗಬೇಕಾಗಿದೆ. ಸರ್ಕಾರ ಸಮಾಜಕ್ಕಾಗಿ ಒಂದು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿರುವುದು ಸರಿಯಲ್ಲ. ಸಮಾಜದ ಹಿತದೃಷ್ಟಿಯಿಂದ ಅನುದಾನವನ್ನು ಹತ್ತು ಕೋಟಿ ರೂಪಾಯಿಗಳಿಗೆ ಹೆಚ್ಚಿಸಬೇಕು. ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಲಾವಿದರಿಗೆ ಸಮರ್ಪಕವಾಗಿ ಮಾಸಾಶನ ನೀಡಬೇಕು~ ಎಂದು ಒತ್ತಾಯಿಸಿದರು.

ಸಮಾರಂಭದಲ್ಲಿ ವಿವಿಧ ಕಲಾವಿದರಿಂದ ನಾದಸ್ವರ ಹಾಗೂ ಡೋಲುವಾದನ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕಿ ಜ್ಯೋತಿ ರೆಡ್ಡಿ, ಮಾಲೂರಿನ ದಾಸಪ್ಪ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.