ADVERTISEMENT

ಸರಾಸರಿಗಿಂತ ಹೆಚ್ಚಲಿದೆ ಬೇಸಿಗೆ ಮಳೆ

ರೂಪಾ .ಕೆ.ಎಂ.
Published 4 ಏಪ್ರಿಲ್ 2013, 19:53 IST
Last Updated 4 ಏಪ್ರಿಲ್ 2013, 19:53 IST

ಬೆಂಗಳೂರು: ವಾರ್ಷಿಕ ಸರಾಸರಿ ಮಳೆಗಿಂತಲೂ ಈ ಬಾರಿಯ ಬೇಸಿಗೆ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ಸಾಧ್ಯತೆಯಿದ್ದು, ರೈತರು ಹಾಗೂ ಮಳೆ ನೀರು ಸಂಗ್ರಹಕರಿಗೆ ಹೆಚ್ಚಿನ ಉಪಯೋಗವಾಗಲಿದೆ!

ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಿಸಿಲು ತುಸು ಹೆಚ್ಚೇ ಇರುತ್ತದೆ. ಉರಿಯುವ ಬಿಸಿಲು, ತಾಳಲಾರದ ಸೆಕೆಯನ್ನು ಸಮಸ್ಥಿತಿಯಲ್ಲಿಡಲು ಚದುರಿದಂತೆ ಸುರಿಯುವ ಮಳೆ ಇಳೆಯನ್ನು ತಂಪಾಗಿಸುವುದಲ್ಲದೇ ಅಲ್ಪಾವಧಿ ಬೆಳೆಗಳನ್ನು ಬಿತ್ತುವುದಕ್ಕೂ ಸಹಕಾರಿಯಾಗಲಿದೆ. ಕಳೆದ ಬಾರಿ 160 ಮಿ.ಮೀ ಸುರಿದ ಮಳೆ ಈ ಬಾರಿ 200ಮಿ.ಮೀ.ಗೆ ಏರಿಕೆಯಾಗುವ ಸಾಧ್ಯತೆಯಿದೆ.

ಈ ಬಗ್ಗೆ `ಪ್ರಜಾವಾಣಿ 'ಯೊಂದಿಗೆ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ಎಂ.ಬಿ.ರಾಜೇಗೌಡ, `ಚಳಿಗಾಲದ ಅವಧಿ ಕಡಿಮೆಯಾಗಿದ್ದರಿಂದ ಅವಧಿ ಪೂರ್ವ ಬೇಸಿಗೆ ಮಳೆ ಆರಂಭವಾಗಿದೆ. ಸಾಮಾನ್ಯವಾಗಿ ಏಪ್ರಿಲ್ ಮೂರನೇ ವಾರದಲ್ಲಿ ಆರಂಭವಾಗುವ ಮಳೆ ಬೇಗನೇ ಆರಂಭವಾಗಿರುವುದಲ್ಲದೇ, ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದೆ' ಎಂದು ಹೇಳಿದರು.

`ಏಪ್ರಿಲ್ ತಿಂಗಳಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗುವ ವಾಡಿಕೆಯಿದೆ. ಒಮ್ಮೆ ಗರಿಷ್ಠ ಉಷ್ಣಾಂಶ ದಾಖಲಾದರೆ ವಾತಾವರಣದಲ್ಲಿ ಒತ್ತಡ ಹೆಚ್ಚಿ ಮೋಡ ಸಾಂದ್ರಗೊಂಡು ಮಳೆ ಸುರಿಯುತ್ತದೆ. ಆದರೆ ಈ ಬಾರಿ ಫೆಬ್ರುವರಿ ತಿಂಗಳಿನಲ್ಲಿಯೇ ರಾಜ್ಯದ ವಿವಿಧ ಭಾಗಗಳಲ್ಲಿ ಗರಿಷ್ಠ ಪ್ರಮಾಣದ ಉಷ್ಣಾಂಶ ದಾಖಲಾಗುತ್ತಿರುವುದರಿಂದ ಅಲ್ಲಲ್ಲಿ ಬೇಸಿಗೆಯ ಮಳೆಯ ಆರಂಭವಾಗಿದೆ' ಎಂದು ತಿಳಿಸಿದರು.

`ಬೇಸಿಗೆಯ ಮಳೆ ಬಿದ್ದ ಪ್ರದೇಶದಲ್ಲಿ ಮತ್ತೆ ಉಷ್ಣಾಂಶ ಏರಿಕೆಯಾಗದಿರುವುದೇ ಇದರ ವೈಶಿಷ್ಯ.  36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾದರೆ ಮಳೆ ನಂತರ ಉಷ್ಣಾಂಶ ಕಡಿಮೆಯಾಗುತ್ತ ಹೋಗುತ್ತದೆ. ಬೇಸಿಗೆ ಅವಧಿ ಹೆಚ್ಚಾಗಿದ್ದರೂ ಅದಕ್ಕೆ ತಕ್ಕಂತೆ ಮಳೆಯ ಪ್ರಮಾಣವೂ ಹೆಚ್ಚಾಗುವುದರಿಂದ ಶಾಖ ಮತ್ತು ತಂಪು ಪ್ರಕೃತಿಯಲ್ಲಿ ಸರಿಸಮನಾಗಿ ಹಂಚಿಹೋಗುತ್ತದೆ' ಎಂದು ಮಾಹಿತಿ ನೀಡಿದರು.

`ವಾಹನದಟ್ಟಣೆ, ಕೈಗಾರಿಕೆ ಉಗುಳುವ ಹೊಗೆಯಿಂದ ವಾತಾವರಣದಲ್ಲಿ ಈಗಾಗಲೇ ಸಂಗ್ರಹವಾಗಿರುವ ಇಂಗಾಲ, ಈಥೆನ್, ಮೀಥೆನ್ ಅನಿಲಗಳು ಬೀಳುವ ಮೊದಲ ಮಳೆಯೊಂದಿಗೆ ಸೇರಿಕೊಳ್ಳುತ್ತವೆ. ಕುಡಿಯುವುದಕ್ಕಿಂತ ಈ ನೀರನ್ನು ಗಿಡ ಹಾಗೂ ಅಲ್ಪಾವಧಿ ಬೆಳೆಗಳಿಗೆ ಬಳಸಬಹುದು' ಎಂದರು.

ಬೇಸಿಗೆ ಮಳೆ: ಯಾವ ಬೆಳೆ?
ಈ ಅವಧಿಯಲ್ಲಿ ಸುರಿಯುವ ಮಳೆ ಕೆರೆ ಕುಂಟೆಗಳು ತುಂಬಲು ಅನುಕೂಲವಾಗುತ್ತದೆ. ಇದರೊಂದಿಗೆ ಭೂಮಿ ತೇವವಾಗುವುದರಿಂದ ಮಣ್ಣು ಶಕ್ತಗೊಳ್ಳಲು ಅನುವು ಮಾಡಿಕೊಡುತ್ತದೆ. ಜೂನ್ ತಿಂಗಳಿನಲ್ಲಿ ಮುಂಗಾರು ಆಗಮನವಾಗುವುದರಿಂದ ರೈತರು ಈ ನೀರನ್ನು ಸಂಗ್ರಹ ಮಾಡಿಕೊಂಡು ಅಲ್ಪಾವಧಿಯ ಬೆಳೆಗಳನ್ನು ಬೆಳೆಯಬಹುದು.

ಮಣ್ಣು ಹಾಗೂ ನೀರಿನ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕರ್ನಾಟಕದಲ್ಲಿ ಎಳ್ಳು, ಹಲಸಂದೆ, ಹೆಸರು, ಕಡಲೆಕಾಯಿ, ಶೇಂಗಾ, ಜೋಳ, ಚಾಮರಾಜನಗರ, ಮೈಸೂರು ಭಾಗಗಳಲ್ಲಿ ಮೆಕ್ಕೆಜೋಳ, ಉತ್ತರ ಕರ್ನಾಟಕ ಭಾಗದಲ್ಲಿ ಹೆಸರು, ಜೋಳ, ಗೋಧಿ ಬೆಳೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.