ADVERTISEMENT

ಸರ್ಕಾರಕ್ಕೆ, ಸಂಸದರಿಗೆ ನಾಚಿಕೆಯಾಗಬೇಕು

ನಿವೃತ್ತ ನ್ಯಾ. ಎಚ್.ಎನ್.ನಾಗಮೋಹನ್‌ ದಾಸ್ ಟೀಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಬೆಂಗಳೂರು: ‘ಕಳೆದ 17 ವರ್ಷಗಳಿಂದ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರದ ಕೇಂದ್ರ ಸರ್ಕಾರ ಹಾಗೂ ಸಂಸ­ದರಿಗೆ ನಾಚಿಕೆಯಾಗಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ  ಎಚ್.ಎನ್. ನಾಗಮೋಹನ್ ದಾಸ್ ಟೀಕಿಸಿದರು.

ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಮಹಿಳಾ ಕಾಲೇಜಿನ  ರಾಜ್ಯಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಸಂಸ­ದೀಯ ವ್ಯವಸ್ಥೆಯಲ್ಲಿ ಶಾಸ­ಕಾಂಗದ ಪಾತ್ರ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವ ಅಧಿಕಾರವೂ ಇಲ್ಲದ  ಪಂಚಾ­­ಯತಿಗಳಲ್ಲಿ ಮಾತ್ರ ಮಹಿಳೆ­ಯರಿಗೆ ಸ್ಥಾನ ಕಲ್ಪಿಸಲಾಗಿದೆ. ಶಾಸನ­ವನ್ನು ರೂಪಿಸುವ ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಮೀಸಲಾತಿ ನೀಡಲು ಯಾವ ರಾಜಕೀಯ ಪಕ್ಷವೂ ಆಸಕ್ತಿ ತೋರುತ್ತಿಲ್ಲ’ ಎಂದು ಹೇಳಿದರು.

‘ರೈತರು ಮತ್ತು ಕಾರ್ಮಿಕರನ್ನು ಪ್ರತಿ­ನಿಧಿಸುವ ಸಂಸತ್ ಸದಸ್ಯರ ಸಂಖ್ಯೆ ಕಡಿಮೆ­ಯಾಗುತ್ತಿದೆ. ಜನರ ಸಮಸ್ಯೆ­, ಮಸೂದೆಗಳ ಬಗ್ಗೆ ಚರ್ಚಿಸಬೇಕಾ­ಗಿದ್ದ ಅಧಿ­ವೇಶನಗಳು ಪ್ರತಿ­ಭಟನೆ, ಗದ್ದಲ­ಗಳಿಂದ ವ್ಯರ್ಥವಾಗು­ತ್ತಿದೆ. ಚರ್ಚಿ­ಸದೇ  ಮಸೂದೆಗಳನ್ನು ಅಂಗೀಕರಿಸು­ವುದು ಆತಂಕಕಾರಿ ಬೆಳವ­ಣಿಗೆ’ ಎಂದರು.
ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಬಿ.ಎಲ್.ಭಾಗ್ಯಲಕ್ಷ್ಮೀ ಅವರು ಮಾತ­ನಾಡಿ, ‘ವ್ಯವಸ್ಥೆ ಮತ್ತು  ಶಾಸ­ಕಾಂಗವನ್ನು ದೂಷಿಸುವುಕ್ಕಿಂತ ಜನ ಪ್ರತಿ­ನಿಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಜವಾಬ್ದಾರಿ ನಿರ್ವಹಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ 2013 ನೇ ಸಾಲಿನಲ್ಲಿ  2, 3 ಮತ್ತು 5 ನೇ ರ್‌್ಯಾಂಕ್ ಗಳಿಸಿದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ  ಸ್ನಾತಕೋತ್ತರ ಪದವಿ ವಿದ್ಯಾರ್ಥಿ­ಗಳಾದ ಎಂ.ಸುಷ್ಮಾ, ಸಿ.ಎಂ.­ಸುಮಿತ್ರ ಮತ್ತು ಮತ್ತು  ಎಚ್.ಎಸ್.­ಶ್ರುತಿ ಅವರನ್ನು  ಅಭಿನಂದಿಸಲಾಯಿತು. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಮಂಡಳಿಯ ನಿರ್ದೇಶಕ ಎಚ್.ಕೆ.ಜಗದೀಶ್, ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್. ರವಿಕುಮಾರ್, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಿಜಯಕುಮಾರ್ ಉಪಸ್ಥಿತರಿದ್ದರು.

ಯಂಕ ಸೀನ ಸುಬ್ಬ...
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ನಿವೃತ್ತ  ನ್ಯಾ. ಎಚ್.ಎನ್.­ನಾಗಮೋಹನ್ ದಾಸ್, ‘ಕಳೆದ ಚುನಾವಣೆಯಲ್ಲಿ ಇದ್ದ ಯಂಕ, ಸೀನ, ಸುಬ್ಬ ಮುಂದಿನ ಚುನಾ­ವಣೆಗೂ ಸಿದ್ದತೆ ನಡೆಸಿದ್ದಾರೆ. ಮತ­ದಾರರಿಗೆ ಆಯ್ಕೆ ಇಲ್ಲದಿದ್ದ ಮೇಲೆ ಆರಿ­ಸುವುದಾದರೂ ಯಾರನ್ನು? ಯಂಕ, ಸೀನ ಮತ್ತು ಸುಬ್ಬರ ಹೊರತಾಗಿ ಬೇರೆ ಆಯ್ಕೆಗಳು ಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT