ಬೆಂಗಳೂರು: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗುವ ದೂರುಗಳ ಬಗ್ಗೆ ವಿಚಾರಣೆಗೆ ಕಾಯ್ದೆಯ ಅನ್ವಯ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಮೀನಮೇಷ ಎಣಿಸುತ್ತಿರುವ ಸರ್ಕಾರವನ್ನು ಹೈಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.
ಕಳೆದ ಬಾರಿ ವಿಚಾರಣೆ ವೇಳೆ ಕೋರ್ಟ್, ಕೆಲವೊಂದು ಕಾರ್ಯಯೋಜನೆ ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶ ಹೊರಬಿದ್ದು ಎರಡು ತಿಂಗಳು ಕಳೆದರೂ ಇದರ ಆರಂಭವನ್ನೇ ಮಾಡದ ಸರ್ಕಾರದ ಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
‘ಎರಡು ತಿಂಗಳುಗಳಿಂದ ನಿದ್ದೆ ಮಾಡುತ್ತಿದ್ದೀರಾ ಅಥವಾ ಕನಸು ಕಾಣುತ್ತಿದ್ದೀರಾ? ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು ಎನ್ನುವುದು ನಿಮಗೆ ತಿಳಿಯಲಿಲ್ಲವೇ, ಇದು ಮಕ್ಕಳಿಗೆ ಸಂಬಂಧಿಸಿದ ವಿಷಯ.ಪ್ರಕರಣದ ಗಂಭೀರತೆ ತಿಳಿಯುತ್ತಿಲ್ಲವೇ’ ಎಂದು ನ್ಯಾಯಮೂರ್ತಿಗಳು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು.
ಕೆಲ ಜಿಲ್ಲೆಗಳಲ್ಲಿನ ದೌರ್ಜನ್ಯ ಪ್ರಕರಣಗಳ ಬಗೆಗಿನ ಅಂಕಿ ಅಂಶವನ್ನು ಅರ್ಜಿದಾರರ ಪರ ವಕೀಲೆ ಶೀಲಾ ರಾಮನಾಥನ್ ನೀಡಿದರು. ಆದರೆ ಒಂದೇ ಒಂದು ಅಂಕಿ ಅಂಶವನ್ನು ಸರ್ಕಾರ ಕಲೆ ಹಾಕಿರಲಿಲ್ಲ. ಇದರಿಂದ ಕೊನೆಯದಾಗಿ 6 ವಾರಗಳ ಗಡುವು ನೀಡಿರುವ ಪೀಠ, ಯಾವ ಜಿಲ್ಲೆಗಳಲ್ಲಿ ಎಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಆದೇಶಿಸಿದೆ. ಇದರ ಆಧಾರದ ಮೇಲೆ ವಿಶೇಷ ಕೋರ್ಟ್ ಸ್ಥಾಪನೆಗೆ ಕ್ರಮ ತೆಗದುಕೊಳ್ಳುವುದು ಕೋರ್ಟ್ ಉದ್ದೇಶ. ಅರ್ಜಿಯ ವಿಚಾರಣೆಯನ್ನು ಮೇ 30ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.