ADVERTISEMENT

‘ಸರ್ಕಾರದಿಂದ ಲಿಂಗಾಯತ ಅಧಿಕಾರಿಗಳ ಶೋಷಣೆ’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:52 IST
Last Updated 9 ಏಪ್ರಿಲ್ 2018, 19:52 IST

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ):‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ನಾಲ್ಕು ಸಾವಿರಕ್ಕೂ ಹೆಚ್ಚು ಲಿಂಗಾಯತ ಅಧಿಕಾರಿಗಳನ್ನು ಶೋಷಣೆ ಮಾಡಿದೆ’ ಎಂದು ಅಣ್ಣಾ ಫೌಂಡೇಷನ್‌ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ಮುಲಾಲಿ ಸೋಮವಾರ ಇಲ್ಲಿ ಆರೋಪಿಸಿದರು.

ಸರ್ಕಾರದ ದರ್ಪ, ದೌರ್ಜನ್ಯಕ್ಕೆ ಲಿಂಗಾಯತ ಅಧಿಕಾರಿಗಳು ಬಲಿಪಶು ಆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಜಾತಿ ವ್ಯಾಮೋಹದಿಂದ ಲಿಂಗಾಯತ ಅಧಿಕಾರಿಗಳು ಮೂಲೆಗುಂಪಾಗಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ವೀರಶೈವರು, ಲಿಂಗಾಯತರು ಸಾಕಷ್ಟು ಶೋಷಣೆಗೆ ಒಳಗಾಗಿರುವಾಗ, ಕೆಲ ಕಾವಿಧಾರಿಗಳು ಕಾಂಗ್ರೆಸ್‌ಗೆ ಮತ ನೀಡುವಂತೆ ಹೇಳಿಕೆ ನೀಡಿರುವುದು ಸರಿಯಲ್ಲ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಿರ್ದಿಷ್ಟ ಪಕ್ಷಕ್ಕೆ ಮತ ನೀಡುವಂತೆ ಮಠಾಧೀಶರು, ಪೀಠಾಧಿಪತಿಗಳು ಹೇಳುವುದು ಸರಿಯಲ್ಲ. ರಾಜಕೀಯ ನಾಯಕರ ಓಲೈಕೆಗಾಗಿ ಕಾವಿಧಾರಿಗಳು ಮತದಾರರ ಮೇಲೆ ಪ್ರಭಾವ ಬೀರಲು ಮುಂದಾದಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ತಮ್ಮ ಸಂಘಟನೆಯು ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ತಿಳಿಸಿದರು.

ADVERTISEMENT

‘ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ವಿವಿಧ ರಾಜಕೀಯ ಪಕ್ಷಗಳ 22 ಶಾಸಕರ ದಾಖಲೆಗಳನ್ನು ಆಯಾ ಕ್ಷೇತ್ರಗಳಲ್ಲೇ ಬಿಡುಗಡೆಗೊಳಿಸಲು ತಯಾರಿ ನಡೆಸಿದ್ದೇನೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಶಾಸಕರನ್ನು ಸೋಲಿಸಲು ಪಣ ತೊಟ್ಟಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.