ADVERTISEMENT

ಸಾಗಬೇಕಿರುವ ಹಾದಿ ದೂರವಿದೆ

ವಿದ್ಯುತ್ ಚಾಲಿತ ವಾಹನ

ಜಯಸಿಂಹ ಆರ್.
Published 4 ಜೂನ್ 2017, 20:14 IST
Last Updated 4 ಜೂನ್ 2017, 20:14 IST
ಸಾಗಬೇಕಿರುವ ಹಾದಿ ದೂರವಿದೆ
ಸಾಗಬೇಕಿರುವ ಹಾದಿ ದೂರವಿದೆ   

ಪಳೆಯುಳಿಕೆ ಇಂಧನ (ಪೆಟ್ರೋಲ್‌, ಡೀಸೆಲ್) ಚಾಲಿತ ವಾಹನಗಳಿಂದಾಗುವ ವಾಯುಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟ ತಲುಪಿರುವ ಕಾರಣ, ಆಟೊಮೊಬೈಲ್ ಕ್ಷೇತ್ರ ವಿದ್ಯುತ್ ಚಾಲಿತ ವಾಹನಗಳತ್ತ ಹೊರಳುತ್ತಿದೆ. ಹಲವು ಜಾಗತಿಕ ಕಂಪೆನಿಗಳ, ಸಂಪೂರ್ಣ ವಿದ್ಯುತ್ ಚಾಲಿತ ವಾಹನಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. 

ಭಾರತದ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಹ ಮೂರು ಸಂಪೂರ್ಣ ವಿದ್ಯುತ್ ಚಾಲಿತ ವಾಹನಗಳನ್ನು ಮಾರಾಟ ಮಾಡುತ್ತಿದೆ. ಜತೆಗೆ ಒಮ್ಮೆ ಚಾರ್ಜ್ ಮಾಡಿದರೆ 350 ಕಿ.ಮೀ ದೂರ ಕ್ರಮಿಸುವ ಮತ್ತು 220 ಕಿ.ಮೀ/ಗಂಟೆ ವೇಗದಲ್ಲಿ ಚಲಿಸುವ ವಿದ್ಯುತ್ ಚಾಲಿತ ಎಸ್‌ಯುವಿಯನ್ನು ಕಂಪೆನಿ ಅಭಿವೃದ್ಧಿ ಅಭಿವೃದ್ಧಿಪಡಿಸುತ್ತಿದೆ ಎಂದು ಮೂಲಗಳು ಹೇಳಿವೆ. ಮಹೀಂದ್ರಾ ಇವಿಗಳಲ್ಲಿ ಲಿಥಿಯಂ ಅಯಾನ್ ಪಾಸ್ಪೇಟ್ ಬ್ಯಾಟರಿಗಳನ್ನು ಬಳಸಲಾಗಿದೆ.

1990ರ ದಶಕದಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿಯಾದರೂ, ಜನಪ್ರಿಯತೆ ಪಡೆದುಕೊಂಡದ್ದು 2000ದ ನಂತರ. ಲಿ– ಅಯಾನ್ ಬ್ಯಾಟರಿಗಳಿಗಿಂತ ಇವು ಕಡಿಮೆ ಪ್ರಮಾಣದಲ್ಲಿ ಡಿಸ್‌ಚಾರ್ಜ್ ಆಗುತ್ತದೆ. ಹೀಗಾಗಿ ಒಮ್ಮೆ ಚಾರ್ಜ್ ಮಾಡಿದರೆ, ಹೆಚ್ಚು ದೂರ ಕ್ರಮಿಸಲು ಸಾಧ್ಯ.

ADVERTISEMENT

ಪೂರ್ವಗ್ರಹ ಬದಲಿಸಿದ ಟೆಸ್ಲಾ
ವಿದ್ಯುತ್ ಚಾಲಿತ ವಾಹನಗಳು ನೋಡಲು ಅನಾಕರ್ಷಕವಾಗಿದ್ದ, ಸಾಧಾರಣ ವೇಗದಲ್ಲಷ್ಟೇ ಓಡಲು ಸಾಧ್ಯವಿದ್ದ ಮತ್ತು ಕೆಲವೇ ಕಿ.ಮೀ ದೂರ ಮಾತ್ರ ಕ್ರಮಿಸುವ ಕಾಲವಿತ್ತು. ಅದನ್ನೆಲ್ಲಾ ಸುಳ್ಳಾಗಿಸಿದ್ದು ಅಮೆರಿಕದ ಕಾರು ತಯಾರಿಕಾ ಕಂಪೆನಿ ಟೆಸ್ಲಾ.

ವಿಶ್ವದಲ್ಲಿ ತಯಾರಾಗುತ್ತಿರುವ ಮತ್ತು ಮಾರಾಟವಾಗುತ್ತಿರುವ ವಿದ್ಯುತ್ ಚಾಲಿತ ವಾಹನಗಳಲ್ಲಿ ಅತ್ಯಂತ ದೂರ ಕ್ರಮಿಸುವ ಮೊದಲ ಮೂರು ಕಾರುಗಳೂ ಟೆಸ್ಲಾ ಕಾರುಗಳೇ ಆಗಿವೆ.

ಟೆಸ್ಲಾ ಕಾರುಗಳು ನೋಟ, ವೇಗ ಮತ್ತು ಸವಲತ್ತುಗಳ ವಿಚಾರದಲ್ಲಿ ಯಾವುದೇ ಸ್ಪೋರ್ಟ್ಸ್ ಮತ್ತು ಸೂಪರ್‌ ಕಾರುಗಳಿಗೆ ಸರಿಸಾಟಿಯಾಗಿ ನಿಲ್ಲುತ್ತವೆ. ವಿದ್ಯುತ್ ಚಾಲಿತ ವಾಹನಗಳ ಸಾಧ್ಯತೆಗಳನ್ನು ವಿಸ್ತರಿಸಿದ ಶ್ರೇಯಸ್ಸು ಈ ಕಂಪೆನಿಗೆ ಸೇರುತ್ತದೆ. ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಮಾತ್ರ ಈ ಕಾರುಗಳು ಲಭ್ಯ ಇವೆ. ಭಾರತಕ್ಕೆ ಈ ಕಾರುಗಳನ್ನು ಬಿಡುಗಡೆ ಮಾಡುವ ಬಗ್ಗೆ ಕಂಪೆನಿ ಈವರೆಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ತನ್ನ ಕಾರುಗಳು ಮಾರಾಟವಾಗುವ ದೇಶ, ಪ್ರಾಂತಗಳಲ್ಲಿ ಅಲ್ಲಲ್ಲಿ ವೇಗದ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಕಂಪೆನಿ ಸ್ಥಾಪಿಸಿದೆ.

ಬದಲಾಗಬೇಕಿದೆ ಬ್ಯಾಟರಿ...
ಭಾರತದಲ್ಲಿ ಮಾರಾಟಕ್ಕಿರುವ ಬಹುತೇಕ ಎಲ್ಲಾ ವಿದ್ಯುತ್ ಚಾಲಿತ ಸೈಕಲ್, ಸ್ಕೂಟರ್ ಮತ್ತು ತ್ರಿಚಕ್ರ ವಾಹನಗಳಲ್ಲಿ ಲಿಥಿಯಂ ಆಕ್ಸೈಡ್ ಬ್ಯಾಟರಿಗಳನ್ನೇ ಬಳಸಲಾಗುತ್ತದೆ. ಇವುಗಳ ಶಕ್ತಿ ಮತ್ತು ಕ್ಷಮತೆ ಕಡಿಮೆ ಇದ್ದರೂ ಗಾತ್ರದಲ್ಲಿ ದೊಡ್ಡವು ಹಾಗೂ ತೂಕವೂ ಹೆಚ್ಚು. ಬೆಲೆ ಕಡಿಮೆ ಇರುವದರಿಂದ ಇವುಗಳನ್ನೇ ಹೆಚ್ಚಿನ ವಿದ್ಯುತ್ ಚಾಲಿತ ವಾಹನಗಳಲ್ಲಿ ಬಳಸಲಾಗುತ್ತಿದೆ. ಇದು ಅತ್ಯಂತ ಕಚ್ಚಾ ಮತ್ತು ಹಳೆಯ ತಂತ್ರಜ್ಞಾನ ಎನಿಸಿದೆ. ಭಾರತದಲ್ಲಿ ವಿದ್ಯುತ್ ಚಾಲಿತ ಸೈಕಲ್/ಸ್ಕೂಟರ್/ತ್ರಿಚಕ್ರ ವಾಹನಗಳು ಅತ್ಯಂತ ಕಳಪೆಯವು, ಉಪಯೋಗವಿಲ್ಲ ಎಂಬ ಕಳಂಕ ಅಂಟಿಕೊಳ್ಳಲು ಈ ಬ್ಯಾಟರಿಗಳೇ ಪ್ರಮುಖ ಕಾರಣ. ಇಂತಹ ಬ್ಯಾಟರಿಗಳಿಗೆ ಚಾರ್ಜಿಂಗ್‌ ಸೈಕಲ್‌ ಮಿತಿ ಇರುತ್ತದೆ. ಅಂದರೆ ಇವನ್ನು ಸುಮಾರು 600 ಬಾರಿ ಚಾರ್ಜ್‌ ಮಾಡಬಹುದು ಅಷ್ಟೆ (ದುಬಾರಿ ಬ್ಯಾಟರಿಗಳ ಚಾರ್ಜಿಂಗ್ ಸೈಕಲ್ ಹೆಚ್ಚು). ಆನಂತರ ಅದರ ದಕ್ಷತೆ, ಕಾರ್ಯಕ್ಷಮತೆ ಕುಗ್ಗುತ್ತಾ ಹೋಗುತ್ತದೆ. ಹೀಗಾಗಿ ಪದೇ ಪದೇ ಬದಲಿಸಬೇಕಾಗುತ್ತದೆ.

ಲಿ–ಅಯಾನ್ ಮತ್ತು ಲಿಥಿಯಂ ಪಾಸ್ಪರೇಟ್ ಬ್ಯಾಟರಿಗಳದ್ದು, ಸುಧಾರಿತ ತಂತ್ರಜ್ಞಾನವಾದರೂ, ಅತ್ಯಂತ ದುಬಾರಿ ಎನಿಸಿವೆ. ಇವುಗಳ ಕಾರಣದಿಂದಲೇ ಉತ್ತಮ ಗುಣಮಟ್ಟದ ವಿದ್ಯುತ್ ಚಾಲಿತ ವಾಹನಗಳು ಕೈಗೆಟುಕದಷ್ಟು ದುಬಾರಿಯಾಗಿವೆ. ಹೀಗಾಗಿ ಸಣ್ಣ ಗಾತ್ರದ, ಹೆಚ್ಚು ಸಾಮರ್ಥ್ಯದ, ದೀರ್ಘಕಾಲ ಬಾಳಿಕೆ ಬರುವ ಮತ್ತು ಕಡಿಮೆ ವೆಚ್ಚದ ಬ್ಯಾಟರಿಗಳನ್ನು ಅಭಿವೃದ್ಧಿಸುವ ಕಾರ್ಯ ವಿಶ್ವದ ಹಲವೆಡೆ ನಡೆಯುತ್ತಿದೆ.

ಮಾಲಿನ್ಯವೂ ಇದೆ; ‘ಭಾರತದಲ್ಲಿ ಉತ್ಪಾದನೆಯಾಗುವ  ಒಟ್ಟು ವಿದ್ಯುತ್‌ನಲ್ಲಿ ಶೇ 65ರಷ್ಟು, ಕಲ್ಲಿದ್ದಲು ಬಳಸುವ ಉಷ್ಣ ವಿದ್ಯುತ್ ಸ್ಥಾವರಗಳಿಂದ ಬರುತ್ತದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾದರೆ, ವಿದ್ಯುತ್ ಬಳಕೆಯೂ ಹೆಚ್ಚುತ್ತದೆ. ಒಂದೊಮ್ಮೆ ಆ ವಿದ್ಯುತ್ ಉಷ್ಣ ವಿದ್ಯುತ್ ಸ್ಥಾವರಗಳಿಂದಲೇ ಉತ್ಪಾದನೆಯಾಗಿದ್ದಲ್ಲಿ, ಮಾಲಿನ್ಯದ ಪ್ರಮಾಣ ಹೆಚ್ಚುತ್ತದೆ’ ಎಂಬ ಅಕ್ಷೇಪವೂ ಇದೆ.

ಮಹೀಂದ್ರಾ ಇ2ಒ ಪ್ಲಸ್
ಇದು ಭಾರತದಲ್ಲಿ ಮಾರಾಟವಾಗುತ್ತಿರುವ ಸಂಪೂರ್ಣ ವಿದ್ಯುತ್ ಚಾಲಿತ, ಪೂರ್ಣ ಪ್ರಮಾಣದ ಕಾರು. ಒಂದೂವರೆ ದಶಕದ ಹಿಂದೆ ಬೆಂಗಳೂರಿನ ರೇವಾ ಕಂಪೆನಿ, ರೇವಾ ಹೆಸರಿನಲ್ಲಿ ವಿದ್ಯುತ್ ಚಾಲಿತ ಕಾರನ್ನು ಮಾರುಕಟ್ಟೆಗೆ ತಂದಿತ್ತು. ಆ ರೇವಾ ಕಾರಿನ ಮೂರನೇ ತಲೆಮಾರಿನ ಅವತರಣಿಕೆಯೇ ಇ2ಒ ಪ್ಲಸ್.

ಇ –ವೆರಿಟೊ
ಇದೂ ಸಹ ಮಹೀಂದ್ರಾ ಕಂಪೆನಿಯದ್ದೇ ಕಾರು. ಆದರೆ, ಇದು ಪೂರ್ಣ ಪ್ರಮಾಣದ ಸೆಡಾನ್. ಇದು ಬಿಡುಗಡೆಯಾಗಿ ವರ್ಷ ಕಳೆದರೂ ಮಾರುಕಟ್ಟೆಯನ್ನು ಸೆಳೆದದ್ದು ಕಡಿಮೆ. ದೊಡ್ಡ ಕಾರು ಆಗಿದ್ದರೂ, ವೇಗ ಮತ್ತು ಕ್ರಮಿಸುವ ದೂರ ತೀರಾ ಕಡಿಮೆ ಇರುವುದು ಕೊರತೆಯೇ ಹೌದು.

ಮಾಡೆಲ್ ಎಸ್
* ಸದ್ಯ ಮಾರುಕಟ್ಟೆಯಲ್ಲಿರುವ ಅತ್ಯಂತ ವೇಗದ ವಿದ್ಯುತ್ ಚಾಲಿತ ಕಾರು

* ಆಲ್‌ ವ್ಹೀಲ್ ಡ್ರೈವ್ ಸವಲತ್ತು ಇದೆ. ಮುಂಬದಿ ಮತ್ತು ಹಿಂಬದಿ ಚಕ್ರಗಳ ಚಾಲನೆಗೆ ಎರಡು ಪ್ರತ್ಯೇಕ ಮೋಟಾರ್‌ಗಳಿವೆ

* ಲ್ಯಾಪ್‌ಟಾಪ್‌ಗಳಲ್ಲಿ ಬಳಸುವ ಲಿ–ಅಯಾನ್ ಬ್ಯಾಟರಿಗಳನ್ನೇ ಸಾವಿರಾರು ಸಂಖ್ಯೆಯಲ್ಲಿ ಈ ಕಾರ್‌ನಲ್ಲಿ ಬಳಸಲಾಗಿದೆ. ಇವು ಸಣ್ಣ ಬ್ಯಾಟರಿಗಳಾದ್ದರಿಂದ, ಹಾಳಾದಲ್ಲಿ ಬದಲಾವಣೆಗೆ ಹೆಚ್ಚು ವೆಚ್ಚ ಮಾಡಬೇಕಾಗಿಲ್ಲ. ಜತೆಗೆ ಬಿಸಿಯಾದ ಬ್ಯಾಟರಿಗಳನ್ನು ವೇಗವಾಗಿ ತಣ್ಣಗಾಗಿಸಬಹುದು. ಲಿ–ಅಯಾನ್ ಬ್ಯಾಟರಿಗಳು ಈಗಾಗಲೇ ಸಾಬೀತಾಗಿರುವ ತಂತ್ರಜ್ಞಾನವಾದ್ದರಿಂದ ಕಾರಿನ ಒಟ್ಟು ವೆಚ್ಚದಲ್ಲಿ ಭಾರಿ ಇಳಿಕೆಯಾಗುತ್ತದೆ

* ಸ್ವಯಂಚಾಲಿತ ಚಾಲನಾ ವ್ಯವಸ್ಥೆ ಇದೆ. ವೇಗವನ್ನು ಕಾಯ್ದುಕೊಳ್ಳುವ, ಲೇನ್‌ ಬದಲಾವಣೆ, ಎದುರಿನ ವಾಹನ/ವ್ಯಕ್ತಿ/ವಸ್ತುಗಳನ್ನು ಗುರುತಿಸಿ ಚಲನೆಯ ದಿಕ್ಕು ಬದಲಿಸುವ ಮತ್ತು ಬ್ರೇಕ್ ಹಾಕುವ ಕೆಲಸವನ್ನು ಕಾರು ಸ್ವತಃ ತಾನೇ ಮಾಡುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.