ADVERTISEMENT

ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆಗೆ ಶರಣು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಬೆಂಗಳೂರು: ರಾಮಮೂರ್ತಿನಗರ ಸಮೀಪದ ಗ್ರೀನ್‌ಪಾರ್ಕ್ ಲೇಔಟ್‌ನಲ್ಲಿ ಸೋಮವಾರ ರಾತ್ರಿ ಗೋಪಾಲನ್ (33) ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳುನಾಡು ಮೂಲದ ಗೋಪಾಲನ್, ಮಾರತ್‌ಹಳ್ಳಿ ಬಳಿಯ ಸಾಫ್ಟ್‌ವೇರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದರು. ಅವರು ಪತ್ನಿ ಗೀತಾ ಮತ್ತು ಮಗುವಿನೊಂದಿಗೆ ಗ್ರೀನ್‌ಪಾರ್ಕ್ ಲೇಔಟ್‌ನಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು.

ಪತ್ನಿ ಮತ್ತು ಮಗು ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಪ್ರತ್ಯೇಕ ಕೋಣೆಗೆ ತೆರಳಿ ನೇಣು ಹಾಕಿಕೊಂಡಿದ್ದಾರೆ. ಗೋಪಾಲನ್, ಈ ಮೊದಲು ಶಾಂತಿ ಎಂಬುವರನ್ನು ವಿವಾಹವಾಗಿದ್ದರು. ಕೆಲ ವರ್ಷಗಳ ಹಿಂದೆ ಶಾಂತಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದ ಅವರು ನಂತರ ಗೀತಾ ಅವರನ್ನು ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಪಘಾತ: ವ್ಯಕ್ತಿ ಸಾವು
ನಗರದ ಮೈಸೂರು ರಸ್ತೆಯ ದುಬಾಸಿಪಾಳ್ಯ ಜಂಕ್ಷನ್ ಬಳಿ ಸೋಮವಾರ ರಾತ್ರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಡಿಕ್ಕಿ ಹೊಡೆದು ಜಗಕಮಲು (30) ಎಂಬುವರು ಮೃತಪಟ್ಟಿದ್ದಾರೆ.

ಒಡಿಶಾ ಮೂಲದ ಜಗಕಮಲು ಅವರು ದುಬಾಸಿಪಾಳ್ಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೈಸೂರು ರಸ್ತೆ ಬಳಿಯ ಸಿದ್ಧ ಉಡುಪು ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು ರಾತ್ರಿ ಮನೆಗೆ ನಡೆದು ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅವರು ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕೋಲಾರ ಡಿಪೊಗೆ ಸೇರಿದ ಆ ಬಸ್ ನಗರದಿಂದ ಮೈಸೂರಿಗೆ ಹೋಗುತ್ತಿತ್ತು. ಬಸ್ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಗೇರಿ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.