ಬೆಂಗಳೂರು: `ನಾಯಕ ಜನಾಂಗವು ಸಾಮಾಜಿಕ ಹಾಗೂ ರಾಜಕೀಯವಾಗಿ ಮುನ್ನೆಲೆಗೆ ಬರಲು ಜನಾಂಗದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು~ ಎಂದು ಅಥಣಿಯ ಅಲ್ಲಮಪ್ರಭು ಮಹಾ ಸಂಸ್ಥಾನದ ಮಲ್ಲಿಕಾರ್ಜುನ ಸ್ವಾಮೀಜಿ ಕರೆ ನೀಡಿದರು.
ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ನಾಯಕ ಜನಾಂಗಕ್ಕೆ ಶಿಕ್ಷಣ, ಸಂಸ್ಕಾರ ಹಾಗೂ ಒಗ್ಗಟ್ಟಿನ ಕೊರತೆಯಿದೆ. ಹೀಗಾಗಿ ಜನಾಂಗದ ಪ್ರಮುಖರು ಎಷ್ಟೇ ಪ್ರಯತ್ನಪಟ್ಟರೂ ಜನಾಂಗವನ್ನು ಒಗ್ಗೂಡಿಸಲು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿ ಮೇಲ್ವರ್ಗದ ಜನರೊಂದಿಗೆ ಸರಿಸಮವಾಗಿ ನಿಲ್ಲಲು ಜನಾಂಗದ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು~ ಎಂದು ಅವರು ಹೇಳಿದರು.
`ಈಚೆಗೆ ಎಲ್ಲ ಸಮುದಾಯಗಳೂ ರಾಜಕೀಯವಾಗಿ ಪ್ರಬಲವಾಗಲು ಸಂಘಟಿತ ಹೋರಾಟ ನಡೆಸುತ್ತಿವೆ. ಆದರೆ, ಈ ಹೋರಾಟಗಳಲ್ಲಿ ಸಮುದಾಯಗಳ ಜನರು ಪೂರ್ಣವಾಗಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಈ ಹೋರಾಟಗಳು ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.
`ವಾಲ್ಮೀಕಿ ಮಹರ್ಷಿ ಕೇವಲ ನಾಯಕ ಜನಾಂಗಕ್ಕೆ ಸೀಮಿತವಾದವರಲ್ಲ. ಜೀವನದ ಎಲ್ಲ ಮುಖಗಳನ್ನೂ ತೋರುವ ರಾಮಾಯಣದಂಥ ಪವಿತ್ರ ಗ್ರಂಥವನ್ನು ಲೋಕಕ್ಕೆ ಕೊಟ್ಟ ಮಹಾನುಭಾವ ವಾಲ್ಮೀಕಿ ಮಹರ್ಷಿ. ಹೀಗಾಗಿ ಪ್ರತಿಯೊಂದು ಮನೆಯಲ್ಲೂ ರಾಮಾಯಣ ಗ್ರಂಥ ಇರಬೇಕು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.