ADVERTISEMENT

`ಸಾಹಿತ್ಯ, ಸಂಗೀತ ಸಹೃದಯರನ್ನು ತಲುಪಲಿ'

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ಬೆಂಗಳೂರು: `ಸಾಹಿತ್ಯ ಮತ್ತು ಸಂಗೀತ ಕಲೆಗಳು ಗ್ರಂಥಗಳಲ್ಲಿ ಉಳಿದರೆ ಸಾಲದು ಅವು ಕೇಳುಗರು, ಓದುಗರು ಮತ್ತು ಸಹೃದಯರನ್ನು ತಲುಪಬೇಕು' ಎಂದು ಸಾಹಿತಿ ಡಾ.ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.

ಭಾನುವಾರ ನಗರದ ನಯನ ಸಭಾಂಗಣದಲ್ಲಿ ಸಂಗೀತ ಸಂಗಮ ಟ್ರಸ್ಟ್‌ನ ಮೊದಲ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಂಗೀತ ಸುಧೆ ಗೀತೋತ್ಸವ ಸಮಾರಂಭದಲ್ಲಿ `ಸಂಗೀತ ಸಂಗಮ ವಾರ್ಷಿಕ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.

`ಸಾಹಿತ್ಯದ ಹಾದಿ ಬಲುದೂವಾದುದು. ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯ ಎರಡು ಮುಖಗಳು. ಗಮಕ ಕಲೆಯು ಸಾಹಿತ್ಯ ಮತ್ತು ಸಂಗೀತವನ್ನು ಒಳಗೊಂಡಿದೆ. ಇದರ ಮುಂದುವರಿದ ರೂಪವೇ ಸುಗಮ ಸಂಗೀತ' ಎಂದರು.

ADVERTISEMENT

`ಇಂದಿನ ಸುಗಮ ಸಂಗೀತ ಗಾಯಕರು ಒಂದು ಪಲ್ಲವಿ, ಎರಡು ಚರಣವನ್ನು ಹಾಡುವುದನ್ನು ಕಲಿತು ಅದನ್ನೇ ತಮ್ಮ ಸಾಧನೆ ಎಂದು ಭಾವಿಸಿದ್ದಾರೆ. ಆದರೆ, ಸಂಗೀತ ಮತ್ತು ಸಾಹಿತ್ಯದ ಆಳವಾದ ಅಧ್ಯಯನದಿಂದ ಗಾಯಕರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಈ ಮೂಲಕ ಸುಗಮ ಸಂಗೀತದ ಪಾವಿತ್ರ್ಯತೆಯನ್ನು ಹೆಚ್ಚಿಸಬೇಕು' ಎಂದು ಗಾಯಕರಿಗೆ ಕರೆ ನೀಡಿದರು.

ಹಿರಿಯ ಚಲನಚಿತ್ರ ನಿರ್ದೇಶಕ ಭಗವಾನ್ ಮಾತನಾಡಿ, `ಹಳೇ ಕಾಲದ ಸಾಹಿತ್ಯ ಮತ್ತು ಸಂಗೀತದ ರುಚಿ ಇಂದು ಮರೆಯಾಗಿದೆ. ಡಾ.ರಾಜ್‌ಕುಮಾರ್ ಅವರಂತಹ ಮೇರು ನಟರ ಚಲನಚಿತ್ರಗಳನ್ನು ನಾನು ನಿರ್ದೇಶನ ಮಾಡಿದ್ದು ನನ್ನ ಪುಣ್ಯ. ನಾನು ಅವರು ಒಳ್ಳೆಯ ಸ್ನೇಹಿತರಾಗಿದ್ದೆವು.  ನನಗೆ ಯಾವುದೇ ಗೌರವ ಸಿಕ್ಕಿದರೂ ಅದು ಅವರಿಗೆ ಸಲ್ಲಬೇಕು' ಎಂದರು.

ಗಾಯಕರಾದ ಪುತ್ತೂರು ನರಸಿಂಹನಾಯಕ್, ಆನಂದ ಮಾದಲಗೆರೆ, ಅರ್ಚನಾ ರವಿ, ಎನ್.ರಮ್ಯಾ ಭಾದ್ವಾಜ್ ಗಾಯನ ಪ್ರಸ್ತುತ ಪಡಿಸಿದರು.  ಸಮಾರಂಭದಲ್ಲಿ ಗಾಯಕಿ ಇಂದೂ ವಿಶ್ವನಾಥ್, ಸಮಾಜ ಸೇವಕ ಟಿ.ಎ.ಶರವಣ, ಟ್ರಸ್ಟ್ ಅಧ್ಯಕ್ಷೆ ಆರ್.ಲಕ್ಷ್ಮಿ ,ವಕೀಲರಾದ ಎಲ್.ಎಸ್.ಕಿರಣ್ಮಯಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.