ADVERTISEMENT

ಸಿಂಡಿಕೇಟ್ ಸಭೆಯ ತೀರ್ಮಾನಕ್ಕೆ ಆಕ್ರೋಶ

ಬಿ.ಇಡಿ ಕಾಲೇಜ ಗುಣಮಟ್ಟ: ಮಧ್ಯಂತರ ವರದಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಬೆಂಗಳೂರು: ಬಿ.ಇಡಿ ಕಾಲೇಜುಗಳ ಗುಣಮಟ್ಟದ ಬಗ್ಗೆ ಕಾರ್ಯಪಡೆ ನೀಡಿರುವ ಮಧ್ಯಂತರ ವರದಿಯ ಶಿಫಾರಸುಗಳಿಗೆ ಮಾನ್ಯತೆ ನೀಡದ ಸಿಂಡಿಕೇಟ್ ಸಭೆಯ ತೀರ್ಮಾನಕ್ಕೆ ಕಾರ್ಯಪಡೆಯ ಮುಖ್ಯಸ್ಥ ಎಚ್.ಕರಣ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ನವೆಂಬರ್ 30ರಂದು ನಡೆದ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಮಧ್ಯಂತರ ವರದಿಗೆ ಧ್ವನಿಮತದಿಂದ ಒಪ್ಪಿಗೆ ಸೂಚಿಸಲಾಗಿತ್ತು. ಹಂಗಾಮಿ ಕುಲಪತಿ, ಹಂಗಾಮಿ ಕುಲಸಚಿವರು ಹಾಗೂ ಕುಲಸಚಿವ (ಮೌಲ್ಯಮಾಪನ) ಅವರು ಸಿಂಡಿಕೇಟ್ ಸಭೆಯಲ್ಲಿ ನಿಲುವನ್ನು ಬದಲಿಸಿದ್ದಾರೆ. ಈ ಮೂವರ ದ್ವಂದ್ವ ನಿಲುವು ಖಂಡನೀಯ' ಎಂದು ಅವರು ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

`ಸಿಂಡಿಕೇಟ್ ಸಭೆಯಲ್ಲೂ ಮಧ್ಯಂತರ ವರದಿಗೆ ಮೆಚ್ಚುಗೆ ಸೂಚಿಸಲಾಗಿದೆ. ಇನ್ನೊಂದೆಡೆ, ಮೂರು ತಿಂಗಳಲ್ಲಿ ಗುಣಮಟ್ಟ ಸುಧಾರಣೆ ಮಾಡಬೇಕು ಎಂಬ ಷರತ್ತು ವಿಧಿಸಿ ಬಿ.ಇಡಿ ಕಾಲೇಜುಗಳಿಗೆ ಮಾನ್ಯತೆ ಮುಂದುವರಿಸಲಾಗಿದೆ. ಈ ನಿರ್ಧಾರದ ಮೇಲೆ ಸ್ಥಾಪಿತ ಹಿತಾಸಕ್ತಿಗಳು ಪ್ರಭಾವ ಬೀರಿರುವ ಶಂಕೆ ಇದೆ. ವಿವಿ ಸಾಮಾಜಿಕ ಜವಾಬ್ದಾರಿ ಅರಿತು ಮಾನ್ಯತೆ ಮುಂದುವರಿಸುವ ನಿರ್ಧಾರಕ್ಕೆ ಬರಬೇಕಿತ್ತು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

`55 ಕಾಲೇಜುಗಳಿಗೆ ಮಾನ್ಯತೆ ಮುಂದುವರಿಸಬಾರದು ಎಂದು ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಈ ಪೈಕಿ 9 ಕಾಲೇಜುಗಳು ಕಪ್ಪುಪಟ್ಟಿಗೆ ಸೇರಿದ್ದವು. ಈ ಕಾಲೇಜುಗಳಿಗೆ ಕಳೆದ ಶೈಕ್ಷಣಿಕ ವರ್ಷದಲ್ಲೂ ಮಾನ್ಯತೆ ಇರಲಿಲ್ಲ.

ಅಲ್ಲದೆ ಸೇಂಟ್ ಜೋಸೆಫ್ ಕಾಲೇಜ್ ಆಫ್ ಎಜುಕೇಷನ್‌ಗೆ ಎರಡು ಶೈಕ್ಷಣಿಕ ವರ್ಷಗಳಿಂದ ಮಾನ್ಯತೆ ಇರಲಿಲ್ಲ. 10ಕ್ಕೂ ಅಧಿಕ ಕಾಲೇಜುಗಳಿಗೆ ಎನ್‌ಸಿಟಿಇ ಮಾನ್ಯತೆಯೂ ಇಲ್ಲ. ಇಂತಹ ಕಾಲೇಜುಗಳಿಗೆ ಯಾವ ಮಾನದಂಡದ ಮೇಲೆ ಮಾನ್ಯತೆ ಮುಂದುವರಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು' ಎಂದು ಆಗ್ರಹಿಸಿದ್ದಾರೆ.

`ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು ಬೆಂಗಳೂರು ವಿವಿಗೆ ಸರ್ಕಾರಿ ಕೋಟಾದಡಿ 6475 ಬಿ.ಇಡಿ ಸೀಟುಗಳನ್ನು ನೀಡಿತ್ತು. ಇದರಲ್ಲಿ 1,698 ಸೀಟುಗಳು ಮಾತ್ರ ಭರ್ತಿಯಾಗಿವೆ. ಉಳಿದ 4,777 ಸೀಟುಗಳು ಭರ್ತಿಯಾಗದೆ ಉಳಿದಿದ್ದು, ಇವು ಖಾಸಗಿ ಕಾಲೇಜುಗಳ ಪಾಲಾಗಲಿವೆ.

ಇಂತಹ ಸ್ಥಿತಿ ಇರುವಾಗ ಎನ್‌ಸಿಟಿಇ ಮಾನ್ಯತೆ ಇಲ್ಲದ, ಕಪ್ಪುಪಟ್ಟಿಗೆ ಸೇರಿರುವ ಕಾಲೇಜುಗಳಿಗೆ ಮಾನ್ಯತೆ ಮುಂದುವರಿಸುವುದರಿಂದ ಮತ್ತಷ್ಟು ಅವ್ಯವಹಾರಕ್ಕೆ  ಅವಕಾಶ ನೀಡಿದಂತೆ ಆಗುತ್ತದೆ. ಇದರಿಂದ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೆ ಪದವಿ ಪಡೆಯಲಿದ್ದಾರೆ' ಎಂದು ಅವರು ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.