ADVERTISEMENT

ಸಿ.ಆರ್‌.ಸಿಂಹಗೆ ಅಶ್ರುತರ್ಪಣದ ವಿದಾಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:51 IST
Last Updated 1 ಮಾರ್ಚ್ 2014, 19:51 IST

ಬೆಂಗಳೂರು: ಗಿಳಿಯು ಪಂಜರದೊಳಿಲ್ಲ... ಅಯ್ಯೋ.. ರಾಮ.. ರಾಮ..., ಸಿಂಹ.. ಪಂಜರದೊಳಿಲ್ಲ ರಾಮ.. ರಾಮ..
ಈ ಹಾಡು ಕಲಾವಿದರ ಕಂಠದಿಂದ ಹೊರಹೊಮ್ಮುತ್ತಿದ್ದಂತೆ, ಅಲ್ಲಿ ನೆರೆದಿದ್ದ ಸಹಸ್ರ ಸಂಖ್ಯೆಯ ಅಭಿಮಾನಿಗಳ ಕಣ್ತುಂಬಿ ಬಂದವು.

ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದ್ದ ಹಿರಿಯ ನಟ ಹಾಗೂ ರಂಗಕರ್ಮಿ ಸಿ.ಆರ್‌.ಸಿಂಹ ಅವರ ಪಾರ್ಥಿವ ಶರೀರಕ್ಕೆ ಸಾವಿರಾರು ಸಂಖ್ಯೆಯಲ್ಲಿ  ಅಭಿಮಾನಿ­ಗಳು ಅಶ್ರುತರ್ಪಣ ಸಲ್ಲಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿ­ಗಳು ಸಿ.ಆರ್‌.ಸಿಂಹ ಅವರ ತುಘಲಕ್‌ ನಾಟಕದ ಅಭಿನಯ, ಅವರ ವ್ಯಕ್ತಿತ್ವ ಹಾಗೂ ಅವರ ಒಳ್ಳೆಯ ಗುಣಗಳ ಗುಣಗಾನ ಮಾಡಿದರು. ಕೆಲವರು ಅವರ ವ್ಯಕ್ತಿತ್ವದ ಪರಿಚಯ ಮಾಡುತ್ತ ಕಣ್ಣೀರಿಟ್ಟರೆ, ಇನ್ನು ಕೆಲವರು ತಮ್ಮ ದುಃಖವನ್ನು ಮನದಲ್ಲಿಯೇ ಮರೆಮಾಚಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಗಲಿದ ಸಿಂಹ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ‘ಸಿಂಹ ಅವರು ಅದ್ಭುತ ನಟ. ಅವರು ನಾಟಕ, ಸಿನಿಮಾ ಮತ್ತು ನಿರ್ದೇಶನದಲ್ಲಿಯೂ ಮಿಂಚಿ­ದ್ದಾರೆ. ಅವರ ಸಾವಿನಿಂದ ನಾಟಕ ರಂಗ ಮತ್ತು ಸಿನಿಮಾ ರಂಗಕ್ಕೆ ಅಪಾರ ನಷ್ಟವಾಗಿದೆ’ ಎಂದರು.

ಸಂಸದ ಅನಂತಕುಮಾರ್‌ ಅಂತಿಮ ನಮನ ಸಲ್ಲಿಸಿ, ‘ಸಿಂಹ ಅವರು ಒಬ್ಬ ಚಿಂತಕ ನಟ. ಚಲನ­ಚಿತ್ರ­ರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದರು. ವಿಶ್ಲೇಷಣೆ, ನಿರ್ದೇಶನದ ಮೂಲಕ  ನಾಟಕ ಮತ್ತು ಸಿನಿಮಾ ಕ್ಷೇತ್ರದಲ್ಲಿ ಹೊಸ ರೀತಿ ಬೆಳವಣಿಗೆಗೆ ಸಾಕ್ಷಿಯಾದರು’ ಎಂದರು.

‘ಅವರ ನಿರ್ದೇಶನದ ಚಿತೆಗೂ ಚಿಂತೆ ಚಿತ್ರ ಹೊಸ ಅಲೆಯನ್ನೇ ಸೃಷ್ಟಿಸಿತು. ಚಿತ್ರರಂಗ ತನ್ನ ಚಿಂತನೆಯ ಭಾಗವನ್ನು ಕಳೆದುಕೊಂಡಿದೆ’ ಎಂದು ಹೇಳಿದರು.

‘ಸಿಂಹ ಎಂದಿದ್ದರೂ ಸಿಂಹವೇ. ಅವರು ಇಂದು ನಮ್ಮನ್ನಗಲಿದ್ದರೂ ಅವರ ನೆನಪು ಎಂದಿಗೂ ಜನ ಮಾನಸದಲ್ಲಿ ಉಳಿಯುತ್ತದೆ. ಅವರು ತಮ್ಮ ಸಿನಿಮಾ, ನಾಟಕಗಳ ಮೂಲಕ ಅನೇಕ ಕಲಾವಿದರಿಗೆ ಜೀವನವನ್ನು ನೀಡಿದ್ದಾರೆ. ಇದರಿಂದ, ಅವರ ನೆನಪು ಎಂದಿಗೂ ಚಿರಸ್ಥಾಯಿ­ಯಾಗಿರುತ್ತದೆ’ ಎಂದು ಅವರು ನಟಿಸಿದ ಕೆಲವು ಚಿತ್ರಗಳಲ್ಲಿ ಸಹ ನಟನಾಗಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಾಜು ಹೇಳಿದರು.

ಅನೇಕ ಕಲಾವಿದರು, ಅವರ ಒಡನಾಡಿಗಳು ಮತ್ತು ನಾಟಕದ ಸಹ ನಟರು ರಂಗಗೀತೆಗಳು ಮತ್ತು ಭಾವಗೀತೆಗಳ ಮೂಲಕ ಭಾವನಮನ ಸಲ್ಲಿಸಿದರು.

ಸಿ.ಆರ್‌.ಸಿಂಹ ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆ­ಯವರೆಗೆ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಪೊಲೀಸರಿಂದ ಸರ್ಕಾರಿ ಗೌರವ­ವನ್ನು ಸಲ್ಲಿಸಲಾಯಿತು.

ರಾಜ್ಯಸಭೆಯ ಸದಸ್ಯೆ ಬಿ.ಜಯಶ್ರೀ, ನಟಿಯರಾದ ಭಾರತಿ ವಿಷ್ಣುವರ್ಧನ್‌, ಅರುಂಧತಿ ನಾಗ್‌, ಪೂಜಾ ಗಾಂಧಿ, ನಟರಾದ ಲೋಕನಾಥ್‌, ಜಗ್ಗೇಶ್‌ ಇನ್ನು ಮುಂತಾದ ಕಿರು ತೆರೆಯ ಹಾಗೂ ಸಿನಿಮಾ ನಟ ನಟಿಯರು ಅಂತಿಮ ನಮನ ಸಲ್ಲಿಸಿದರು. ಬನಶಂಕರಿ ವಿದ್ಯುತ್‌ ಚಿತಾಗಾರದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.

‘ತುಘಲಕ್‌ ನಾಟಕದ ಅಭಿನಯ ಎಂದಿಗೂ ಜೀವಂತ’
ಇಲ್ಲಿ ಬಂದಿರುವ ಜನರನ್ನು ನೋಡಿದರೆ, ಅವರಿಗಿದ್ದ ಜನಪ್ರಿಯತೆ ಅರ್ಥವಾಗುತ್ತದೆ. ಅಭಿನಯ, ಸಿನಿಮಾ, ನಾಟಕ ರಂಗ ಎಲ್ಲದರ­ಲ್ಲಿಯೂ ಮಿಂಚಿ, ಇಂದು ಮರೆ­ಯಾಗಿ­ದ್ದಾರೆ. ಅವರ ತುಘಲಕ್‌ ನಾಟಕದ ಅಭಿನಯ ಎಂದಿಗೂ ಜೀವಂತ
– ಭಾರ್ಗವ, ನಿರ್ದೇಶಕ.


‘ನಾಟಕರಂಗಕ್ಕೆ ಒಂದು ಶಕ್ತಿ’
ಜಗತ್ತಿನ ನಾಟಕಕಾರರ ನಾಟಕಗಳನ್ನು ಓದಿಕೊಂಡಿದ್ದರು ಸಿಂಹ. 70ರ ದಶಕದಲ್ಲಿ ನಾಟಕರಂಗಕ್ಕೆ ಒಂದು ಶಕ್ತಿ ನೀಡಿದವರು. ಇಂದಿನ ನಟರು ಅವರಿಂದ ಕಲಿಯಬೇಕಾ­ದದ್ದು ಬಹಳಷ್ಟಿದೆ. ಯಾವುದೇ ಸಂಭಾಷಣೆ­ಯನ್ನು ಕಂಠಪಾಠ ಮಾಡಿ ಹೇಳದೆ, ನಾಟಕದ ಜೀವಾಳ­ವನ್ನು ಅರ್ಥ ಮಾಡಿಕೊಂಡು ಹೇಳಬೇಕಾಗಿದೆ.
–ಕೆ.ಮರುಳ ಸಿದ್ದಪ್ಪ, ಸಾಹಿತಿ.

‘ಸಿಂಹನಿಗೆ ಸಿಂಹನೇ ಸಾಟಿ’
ಸಿಂಹನಿಗೆ ಸಿಂಹನೇ ಸಾಟಿ. ಅವರ ಮಾತಿನ ಖದರು, ಆ ಛಾಪಿಗೆ ಬೇರೆ ಯಾರೂ ಸಾಟಿ­ಯಾಗಲು ಸಾಧ್ಯವಿಲ್ಲ. ಅವರ ಸಂಭಾಷಣೆ ಮತ್ತು ಅಭಿನಯವೇ ವಿಭಿನ್ನ
– ಯು.ಆರ್‌.ಅನಂತಮೂರ್ತಿ, ಹಿರಿಯ ಸಾಹಿತಿ.

‘ಸಿಂಹ ಅಜಾತ ಶತ್ರು’

ಅವರು ನಾಟಕದಲ್ಲಿನ ಅಭಿನಯ ಪ್ರೇಕ್ಷಕ­ರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದ್ದವು. ನಾಟಕ­ದಲ್ಲಿ ದೊರೆಯುವ ಆನಂದ ಸಿನಿಮಾದಲ್ಲಿ ದೊರೆಯುವುದಿಲ್ಲ ಎಂದು ಸದಾ ಹೇಳು­ತ್ತಿ­ದ್ದರು. ಅವರೊಬ್ಬ ಅಜಾತ ಶತ್ರು. ಎಲ್ಲರನ್ನೂ ಪ್ರೀತಿಸುತ್ತಿದ್ದ ವ್ಯಕ್ತಿತ್ವ ಅವರದು. ನಾಟಕ­ದಲ್ಲಿಯೂ ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ, ಸಹಜಾಭಿನಯ ಮಾಡುತ್ತಿದ್ದರು
– ಅನಂತನಾಗ್‌,
ಹಿರಿಯ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT