ADVERTISEMENT

ಸಿಡ್ನಿ ಕನಸಲ್ಲಿ ₹12.5 ಲಕ್ಷ ಕಳೆದುಕೊಂಡರು

ಪ್ರತಿಷ್ಠಿತ ಹೋಟೆಲ್‌ಗಳ ನೌಕರರಿಗೆ ವಂಚನೆ

ಎಂ.ಸಿ.ಮಂಜುನಾಥ
Published 13 ಜುಲೈ 2017, 19:49 IST
Last Updated 13 ಜುಲೈ 2017, 19:49 IST
ಸಿಡ್ನಿ ಕನಸಲ್ಲಿ ₹12.5 ಲಕ್ಷ ಕಳೆದುಕೊಂಡರು
ಸಿಡ್ನಿ ಕನಸಲ್ಲಿ ₹12.5 ಲಕ್ಷ ಕಳೆದುಕೊಂಡರು   

ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೆಲಸ ಕೊಡಿಸುವುದಾಗಿ ಪ್ರತಿಷ್ಠಿತ ಹೋಟೆಲ್‌ಗಳ ನೌಕರರನ್ನು ನಂಬಿಸಿದ ವಂಚಕನೊಬ್ಬ, ವಿಮಾನದ ಟಿಕೆಟ್ ದರದ ಹೆಸರಿನಲ್ಲಿ ₹ 12.5 ಲಕ್ಷ ಸಂಗ್ರಹಿಸಿಕೊಂಡು ಪರಾರಿಯಾಗಿದ್ದಾನೆ.

ಇತ್ತ ವಿದೇಶದಲ್ಲಿ ಉದ್ಯೋಗ ಸಿಗುವ ಭರವಸೆಯಲ್ಲಿ ಎಂಟು ನೌಕರರು ಕೈಲಿದ್ದ ಕೆಲಸವನ್ನೂ ಬಿಟ್ಟು ಕುಳಿತಿದ್ದಾರೆ. ಅಲ್ಲದೆ, ಇಷ್ಟು ದಿನ ದುಡಿದು ಕೂಡಿಟ್ಟಿದ್ದ ಹಣವನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ಸುನೀಲ್‌ ಕುಮಾರ್  ಎಂಬುವರು  ಜುಲೈ 11ರಂದು ಹೈಗ್ರೌಂಡ್ಸ್ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಆ ಮಹಾನ್ ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಗ್ರಾಹಕನಂತೆ ಬಂದಿದ್ದ: ಸುನೀಲ್ ಅವರು ರೇಸ್‌ಕೋರ್ಸ್‌ ರಸ್ತೆಯ ಹೋಟೆಲ್‌ವೊಂದರಲ್ಲಿ ಉದ್ಯೋಗಿಯಾಗಿದ್ದರು. 6 ತಿಂಗಳ ಹಿಂದೆ ಗ್ರಾಹಕನ ಸೋಗಿನಲ್ಲಿ ಆ ಹೋಟೆಲ್‌ಗೆ ಹೋಗಿದ್ದ ವಂಚಕ, ‘ನನ್ನ ಹೆಸರು ಸೂರಜ್ ಶೇಖರ್. ಇಲ್ಲೇ ಕನಕಪುರದಲ್ಲಿ ನೆಲೆಸಿದ್ದೇನೆ. ನನ್ನ ಸ್ನೇಹಿತರು ಸಿಡ್ನಿಯ ‘ಎಸ್‌.ಎಸ್‌.ವೆಂಚರ್ಸ್‌’ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನೀವೂ ಎಷ್ಟು ದಿನ ಇಲ್ಯಾಕೆ ಕೆಲಸ ಮಾಡುತ್ತೀರಿ. ಗೆಳೆಯರಿಗೆ ಹೇಳುತ್ತೇನೆ. ಸಿಡ್ನಿಗೆ ಹೋಗಿ ಜೀವನ ರೂಪಿಸಿಕೊಳ್ಳಿ’ ಎಂದಿದ್ದ.

ADVERTISEMENT

ಆತನ ಮಾತನ್ನು ನಂಬಿದ ಸುನೀಲ್, ತಮ್ಮ ಜತೆ ಕೆಲಸ ಮಾಡುತ್ತಿದ್ದ ಹರ್ಷಕುಮಾರ್, ಗೋಪಿನಾಥ್, ಸೋನಾಲ್ ಶ್ರೀವಾಸ್ತವ್ ಹಾಗೂ ಮೋಹನ್ ಸುಂದರಂ ಅವರಿಗೂ ಸಿಡ್ನಿಗೆ ಬರುವಂತೆ ಒಪ್ಪಿಸಿದ್ದರು. ಗೆಳೆಯರು ತಮ್ಮನ್ನು ಬಿಟ್ಟು ವಿದೇಶಕ್ಕೆ ಹೋಗುತ್ತಿರುವ ವಿಚಾರ ತಿಳಿದ ಹೊಸೂರು ರಸ್ತೆಯ ಹೋಟೆಲ್‌ ನೌಕರ ಜಸ್ಸಿ ಎಸ್ತಾರ್ ಹಾಗೂ ವೈಟ್‌ಫೀಲ್ಡ್‌ನ ಹೋಟೆಲ್ ನೌಕರ ಜೀನೇಶ್ ಜೇಮ್ಸ್ ಅವರು ತಾವೂ ವಿದೇಶಕ್ಕೆ ಬರುವುದಾಗಿ ತಿಳಿಸಿದ್ದರು.

ಹೀಗೆ, ಏಳು 7 ನೌಕರರು ಸಿಡ್ನಿ ಪ್ರವಾಸದ ಕನಸು ಕಟ್ಟಿಕೊಂಡು ಹೊರಡಲು ಸಿದ್ಧರಾದರು. ಆಗ ಅವರಿಗೆ ಕಂಪೆನಿ ಲೆಟರ್‌ ಹೆಡ್‌ನಲ್ಲಿ ಉದ್ಯೋಗ ಅವಕಾಶ ಪತ್ರಗಳನ್ನು ವಿತರಿಸಿದ ಆರೋಪಿ, ವೀಸಾ ಹಾಗೂ ವಿಮಾನದ ಟಿಕೆಟ್ ಹೆಸರಿನಲ್ಲಿ ₹ 12.5 ಲಕ್ಷ ಪಡೆದಿದ್ದ. 15 ದಿನಗಳ ಬಳಿಕ ಅವರಿಗೆ ನಕಲಿ ವೀಸಾ ಹಾಗೂ ಟಿಕೆಟ್‌ಗಳನ್ನು ನೀಡಿದ್ದ.

ಕೆಐಎಎಲ್‌ನಲ್ಲಿ ಆಘಾತ: ಜುಲೈ 9ರಂದು ನೌಕರರು ಸಿಡ್ನಿಗೆ ತೆರಳಲು ಲಗೇಜ್ ಸಮೇತ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ಹೋಗಿದ್ದರು. ಅಲ್ಲಿ ಅವರಿಗೆ ಆಘಾತ ಎದುರಾಗಿತ್ತು. ತಮ್ಮ ಬಳಿ ಇದ್ದ ವೀಸಾ ಹಾಗೂ ಟಿಕೆಟ್‌ಗಳು ನಕಲಿ ಎಂಬುದು  ಅವರಿಗೆ ಗೊತ್ತಾಗಿತ್ತು. ಅಲ್ಲದೆ, ಇಡೀ ದಿನ ಕೆಐಎಎಲ್‌ ಭದ್ರತಾ ಸಿಬ್ಬಂದಿಯ ವಿಚಾರಣೆಯನ್ನೂ ಎದುರಿಸಿ ಬಂದಿದ್ದರು.

‘ಕಸ್ಟಮ್ಸ್ ಲೆಟರ್ ತೋರಿಸಿದ್ದ’
‘ಸ್ನೇಹಿತ ಐ–ಫೋನ್‌ಗಳನ್ನು ದುಬೈನಿಂದ ಕಳುಹಿಸಿದ್ದಾನೆ. ಅವು ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿವೆ. ₹ 1 ಲಕ್ಷ ಶುಲ್ಕ ಕಟ್ಟಿದರೆ ಮೊಬೈಲ್‌ಗಳನ್ನು ಕೊಡುವುದಾಗಿ ಪತ್ರ ಕೊಟ್ಟಿದ್ದಾರೆ’ ಎಂದು ‘ಕೆಐಎಎಲ್‌ ಕಸ್ಟಮ್ಸ್‌’ ಹೆಸರಿನ ಲೆಟರ್ ಹೆಡ್‌ನಲ್ಲಿದ್ದ ಪತ್ರವನ್ನು ತೋರಿಸಿದ್ದ. ಆತನ ಮಾತನ್ನು ನಂಬಿ ಹಣ ಕೊಟ್ಟಿದ್ದೆವು’ ಎಂದು ನೌಕರರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜುಲೈ 8ರಂದು ಇಸ್ಕಾನ್ ದೇವಸ್ಥಾನದ ಬಳಿ ಬಂದು ಮೊಬೈಲ್‌ಗಳನ್ನು ಪಡೆದುಕೊಳ್ಳುವಂತೆ ತಿಳಿಸಿದ್ದ. ಅಲ್ಲಿಗೆ ಹೋದರೆ, ಆತ ಬರಲೇ ಇಲ್ಲ. ಮರುದಿನ ಬೆಳಿಗ್ಗೆ ಸಿಡ್ನಿಗೆ ತೆರಳಲು ಕೆಐಎಎಲ್‌ಗೆ ಹೊರಟಾಗ ನಾವು ಮೋಸ ಹೋಗಿರುವುದು ಪೂರ್ಣವಾಗಿ ಅರಿವಿಗೆ ಬಂತು’ ಎಂದು ದುಃಖತಪ್ತರಾದರು.

ಐ–ಫೋನ್ ಕೊಡುಗೆ ಕೊಟ್ಟ!
‘ಇನ್ನು ಮುಂದೆ ನೀವು ಸಿಡ್ನಿಯಲ್ಲಿರುವವರು. ದುಬಾರಿ ಬೆಲೆಯ ಮೊಬೈಲ್‌ಗಳನ್ನು ಇಟ್ಟುಕೊಳ್ಳಬೇಕು. ದುಬೈನಲ್ಲಿರುವ ನನ್ನ ಗೆಳೆಯ ಉತ್ತಮ ಆಫರ್‌ನಲ್ಲಿ ಫೋನ್ ಮಾರಾಟ ಮಾಡುತ್ತಿದ್ದಾನೆ. ಒಂದು ಐ–ಫೋನ್ ಪಡೆದರೆ, ಮತ್ತೊಂದು ಐ–ಫೋನ್ ಉಚಿತವಾಗಿ ನೀಡುತ್ತಾನೆ’ ಎಂದು ಆರೋಪಿ ಹೇಳಿದ್ದ.

ಈ ಮಾತನ್ನೂ ನಂಬಿರುವ ನೌಕರರು, ತಮಗೆ ಮಾತ್ರವಲ್ಲದೆ ಸ್ನೇಹಿತರ ಹೆಸರುಗಳಲ್ಲೂ 28 ಮೊಬೈಲ್‌ಗಳನ್ನು ಬುಕ್ ಮಾಡಿದ್ದರು. ಇದಕ್ಕೆ ಮುಂಗಡವಾಗಿ  ಹಣವನ್ನೂ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

* ಆರೋಪಿ ಇದೇ ರೀತಿ ತಮಿಳುನಾಡಿನ ಹೋಟೆಲ್‌ ನೌಕರರಿಗೂ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಮೊಬೈಲ್ ಕರೆ ವಿವರ ಆಧರಿಸಿ ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ.
-ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.