ADVERTISEMENT

ಸಿದ್ದಯ್ಯ ಪ್ರಕರಣ ಲೋಕಾಯುಕ್ತಕ್ಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:26 IST
Last Updated 5 ಏಪ್ರಿಲ್ 2013, 19:26 IST

ಬೆಂಗಳೂರು: ಬಿಬಿಎಂಪಿ ಆಯುಕ್ತ ಸಿದ್ದಯ್ಯ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ದಾಖಲಿಸಿಕೊಂಡಿರುವ ಎರಡೂ ಪ್ರಕರಣಗಳನ್ನು (68/2013, 69/2013) ಲೋಕಾಯುಕ್ತ ತನಿಖೆಗೆ ವರ್ಗಾಯಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಯಾವುದೇ ತಪ್ಪು ಮಾಡದಿದ್ದರೂ ಬಿಎಂಟಿಎಫ್‌ನಲ್ಲಿ ಪ್ರಕರಣ ದಾಖಲಿಸಿಕೊಂಡು ತರಾತುರಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸಿದ್ಧಪಡಿಸಲಾಗಿದೆ ಎಂದು ಸಿದ್ದಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಿಷ್ಪಕ್ಷಪಾತ ತನಿಖೆ ನಡೆಸಲು ಎರಡೂ ಪ್ರಕರಣಗಳನ್ನು ಲೋಕಾಯುಕ್ತ ಇಲ್ಲವೆ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಸಿದ್ದಯ್ಯ ಅವರಿಂದ ಸರ್ಕಾರಕ್ಕೆ ಮನವಿ ಹೋಗಿರುವುದು ಗೊತ್ತಾದ ಮೇಲೆ ಪ್ರತಿ ಪತ್ರ ಬರೆದಿದ್ದ ಬಿಎಂಟಿಎಫ್ ಎಡಿಜಿಪಿ ಆರ್.ಪಿ. ಶರ್ಮಾ, `ಬಿಎಂಟಿಎಫ್ ಎಸ್ಪಿ ಅವರ ನೇತೃತ್ವದಲ್ಲಿಯೇ ತನಿಖೆ ನಡೆಯಲಿದ್ದು, ಈ ಪ್ರಕರಣದ ಸಂಬಂಧ ಎಡಿಜಿಪಿ ಅವರಿಂದ ಯಾವುದೇ ಸೂಚನೆ ಪಡೆಯಬಾರದು ನಿರ್ದೇಶಿಸಿದ್ದೇನೆ' ಎಂದು ವಿವರಿಸಿದ್ದರು.

ಎರಡೂ ಪ್ರಸ್ತಾವಗಳನ್ನು ಪರಿಶೀಲಿಸಿದ ರಾಜ್ಯ ಸರ್ಕಾರ ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984ರ ಪ್ರಕರಣ 7ರ ಅನ್ವಯ ಲೋಕಾಯುಕ್ತ ತನಿಖೆಗೆ ಪ್ರಕರಣಗಳನ್ನು ವರ್ಗಾಯಿಸಿ ಆದೇಶ (ಸಂಖ್ಯೆ: ಎಚ್‌ಡಿ 97 ಪಿಸಿಸಿ 2013) ಹೊರಡಿಸಿದೆ. ಲೋಕಾಯುಕ್ತ ಪೊಲೀಸರೇ ಪ್ರಕರಣದ ತನಿಖೆ ನಡೆಸಬೇಕು. ಬಿಎಂಟಿಎಫ್ ಎಸ್ಪಿ ತನಿಖೆಗೆ ಅಗತ್ಯ ಸಹಕಾರ ನೀಡಬೇಕು ಮತ್ತು ಅಗತ್ಯ ದಾಖಲೆ ಒದಗಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಬೇಗ ತನಿಖೆ ಪೂರೈಸಿ, ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ವೆಂಕಟೇಶ್ವರ ಪ್ರಸಾದ್ ಈ ಆದೇಶ ಹೊರಡಿಸಿದ್ದಾರೆ.

`ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತನಾಗಿದ್ದ ಸಂದರ್ಭದಲ್ಲಿ ಶರ್ಮಾ ಅವರಿಗೆ ಸಂಬಂಧಿಸಿದ ನಿವೇಶನ ಹಂಚಿಕೆ ವಿಷಯದಲ್ಲಿ ನಾನು ಕೈಗೊಂಡ ತೀರ್ಮಾನ ಅವರ ವಿರುದ್ಧದ ತೀರ್ಮಾನವಾಗಿತ್ತು. ಈ ಕಾರಣದಿಂದ ನನ್ನ ವಿರುದ್ಧ ಇಂತಹ ಸಂಚನ್ನು ರೂಪಿಸಿದ್ದು, ಪ್ರತೀಕಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ' ಎಂದು ಸಿದ್ದಯ್ಯ ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.