ADVERTISEMENT

ಸಿಬಿಎಸ್‌ಇ: ರಾಜ್ಯದ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 28 ಮೇ 2012, 19:30 IST
Last Updated 28 ಮೇ 2012, 19:30 IST

ಬೆಂಗಳೂರು: ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಒಟ್ಟಾರೆ ಶೇ 96.46ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ 96.16ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.

ಚೆನ್ನೈ ವಲಯದಲ್ಲಿ 67,707 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ 61,339 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಚೆನ್ನೈ ವಲಯದಲ್ಲಿ ಗೋವಾ ಮೊದಲ ಸ್ಥಾನದಲ್ಲಿದ್ದು, ಶೇ 97.21ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ರಾಜ್ಯದಲ್ಲಿ ಬಾಲಕಿಯರಿಗಿಂತ, ಬಾಲಕರ ಉತ್ತೀರ್ಣ ಪ್ರಮಾಣ ಹೆಚ್ಚಾಗಿದೆ. ಈ ವರ್ಷ ರಾಜ್ಯದಲ್ಲಿ 5,818 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ 3,355 (ಶೇ 96.54) ಬಾಲಕರು ಪಾಸಾಗಿದ್ದಾರೆ. 2,463 ಬಾಲಕಿಯರು ಪಾಸಾಗಿದ್ದು ಶೇಕಡಾವಾರು ಪ್ರಮಾಣ 96.35ರಷ್ಟಿದೆ.

ಬೆಂಗಳೂರಿನ ಸಿಬಿಎಸ್‌ಇ ಶಾಲೆಗಳ ಕೆಲ ವಿದ್ಯಾರ್ಥಿಗಳು ಶೇ 97ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ. ವೆಂಕಟ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಬಿ.ಕೆ.ಅನಿರುದ್ಧ ಶೇ 98ರಷ್ಟು ಅಂಕಗಳನ್ನು ಗಳಿಸಿದ್ದಾರೆ.

`ಪರೀಕ್ಷೆಗೆ ಕಠಿಣ ಅಭ್ಯಾಸ ಮಾಡಿದ್ದೆ. ನಿರೀಕ್ಷೆಯಂತೆ ಉತ್ತಮ ಅಂಕಗಳು ಬಂದಿವೆ. ಮುಂದೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್ ಮಾಡಲು ಬಯಸಿದ್ದೇನೆ. ಯಾವುದಾದರೂ ಐಐಟಿ ಅಥವಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೀಟು ಸಿಗುವ ವಿಶ್ವಾಸವಿದೆ~ ಎಂದು ಅನಿರುದ್ಧ ತಿಳಿಸಿದರು.

ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಎಸ್.ಅರ್ಚನಾ ಶೇ 97.8, ಆರ್.ಅದಿತಿ ಶೇ 97.4, ಕೆ.ವರ್ಮ ಶೇ 97.6, ಬಿ.ಶ್ರುತಿ ಶೇ 97.6, ವಿವೇಕ್ ಮದಾನಿ ಶೇ 96.4ರಷ್ಟು ಹಾಗೂ ಯಲಹಂಕದ ಕೇಂದ್ರೀಯ ವಿದ್ಯಾಲಯದ ಮನೀಷ್ ಚೌರಾಶಿಯಾ ಅವರು ಶೇ 79ರಷ್ಟು ಅಂಕ ಗಳಿಸಿದ್ದಾರೆ.

ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಎಸ್.ಸಾಗರ್ ಶೇ 97.2, ಅಖಿಲೇಶ್ ಶೇ 97, ದೀಪಾ ಜೈನ್ ಶೇ 96, ಕೋರಮಂಗಲದ ನ್ಯಾಷನಲ್ ಪಬ್ಲಿಕ್ ಶಾಲೆಯ ಎಸ್.ಮಧುಸೂದನ್ ಶೇ 96ರಷ್ಟು ಅಂಕಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.