ADVERTISEMENT

ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಮರುವಿನ್ಯಾಸಕ್ಕೆ ಯೋಜನೆ

ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ; ವಿನ್ಯಾಸ ರೂಪಿಸಿ ಸರ್ಕಾರಕ್ಕೆ ಕಳುಹಿಸಿದ ಟೆಕ್ಕಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2016, 19:32 IST
Last Updated 17 ಜನವರಿ 2016, 19:32 IST
ಸಾಫ್ಟ್‌ವೇರ್ ಉದ್ಯೋಗಿ ಸೈಯದ್ ಇಮ್ರಾನ್ ಸಿದ್ಧಪಡಿಸಿರುವ ವಿನ್ಯಾಸ
ಸಾಫ್ಟ್‌ವೇರ್ ಉದ್ಯೋಗಿ ಸೈಯದ್ ಇಮ್ರಾನ್ ಸಿದ್ಧಪಡಿಸಿರುವ ವಿನ್ಯಾಸ   

ಬೆಂಗಳೂರು: ನಗರದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ಏಕಕಾಲಕ್ಕೆ ನಾಲ್ಕೂ ದಿಕ್ಕಿನ ಕಡೆಗೆ ಯಾವುದೇ ಅಡೆತಡೆ ಇಲ್ಲದೆ ವಾಹನಗಳು ಸಂಚರಿಸುವಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ?

ಈ ರಸ್ತೆಯಲ್ಲಿ ನಿತ್ಯ ಓಡಾಡುವವರು ಇಂತಹ ಪ್ರಶ್ನೆಗೆ ಥಟ್ಟನೆ ‘ಇಲ್ಲ’ ಎಂದು ಉತ್ತರಿಸಿ ಬಿಡಬಹುದು. ಆದರೆ, ಸಾಮಾಜಿಕ ಕಾರ್ಯಕರ್ತ ಸೈಯದ್‌ ಇಮ್ರಾನ್‌ ಮಾತ್ರ ‘ಏಕೆ ಸಾಧ್ಯವಿಲ್ಲ’ ಎಂದು ಮರುಪ್ರಶ್ನೆ ಹಾಕುತ್ತಾರೆ. ಅಲ್ಲದೆ ಜಂಕ್ಷನ್‌ನಲ್ಲಿ ಆಗಬೇಕಾದ ಬದಲಾವಣೆ ಕುರಿತು ತಾವು ಸಿದ್ಧಪಡಿಸಿದ ರೇಖಾಚಿತ್ರವೊಂದನ್ನು ಅವರು ನಮ್ಮ ಕೈಗಿಡುತ್ತಾರೆ.

‘ಸಿಲ್ಕ್ ಬೋರ್ಡ್‌ ಜಂಕ್ಷನ್‌ನ ಸದ್ಯದ ಮೇಲ್ಸೇತುವೆಗೆ ಸಮಾನಾಂತರವಾಗಿ ಒಂದು ಇಂಟರ್‌ಚೇಂಜ್ ಮೇಲ್ಸೇತುವೆ ನಿರ್ಮಾಣ ಮಾಡಿ, ಕೆಳಗೆ ಇಳಿಯಲು ರ‍್ಯಾಂಪ್‌ ಕಲ್ಪಿಸಿದರೆ ದಟ್ಟಣೆ ತಗ್ಗಿಸಲು ಸಾಧ್ಯ’ ಎಂದು ಸೈಯದ್‌ ಹೇಳುತ್ತಾರೆ.

‘ಮಡಿವಾಳ ಮತ್ತು ಎಲೆಕ್ಟ್ರಾನಿಕ್‌ ಸಿಟಿ ನಡುವಿನ ಮೇಲ್ಸೇತುವೆಯನ್ನು ಮಧ್ಯೆ ಎಲ್ಲಿಯೂ ಕೆಳಗೆ ಇಳಿಯಲು ಸಾಧ್ಯವಾಗದಂತೆ ವಿನ್ಯಾಸಗೊಳಿಸಿದ್ದು, ಆದ್ದರಿಂದಲೇ ದಟ್ಟಣೆ ಹೆಚ್ಚಿದೆ’ ಎಂದು ಅವರು ವಿವರಿಸುತ್ತಾರೆ.

‘ಮಡಿವಾಳದಿಂದ ಮೇಲ್ಸೇತುವೆಯಲ್ಲಿ ಹೊರಟವರು ಎಲೆಕ್ಟ್ರಾನಿಕ್‌ ಸಿಟಿಯಲ್ಲೇ ಇಳಿಯಬೇಕು. ಅದೇ ರೀತಿ ಎಲೆಕ್ಟ್ರಾನಿಕ್‌ ಸಿಟಿಯಿಂದ ಹೊರಟವರು ಮಡಿವಾಳದ ವರೆಗೆ ಮಧ್ಯೆ ಎಲ್ಲಿಯೂ ಇಳಿಯಲು ಸಾಧ್ಯ ಆಗುವುದಿಲ್ಲ. ಹೀಗಾಗಿ ಬಿಟಿಎಂ ಲೇಔಟ್, ಸಿಂಗಸಂದ್ರ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ಹೋಗುವವರಿಗೆ ಈ ಮೇಲ್ಸೇತುವೆ ಪ್ರಯೋಜನಕ್ಕೆ ಬಾರದಂತಾಗಿದೆ’ ಎಂದು ಹೇಳುತ್ತಾರೆ.

‘ಮೇಲ್ಸೇತುವೆ ಬಳಿ ಗ್ರೇಡ್‌ ಸೆಪರೇಟರ್ ನಿರ್ಮಾಣ ಮಾಡಬೇಕು. ಅದರಲ್ಲಿ ಆರು ರ‍್ಯಾಂಪ್‌ಗಳು ನಿರ್ಮಿಸಬೇಕು. ಇದರ ಮೂಲಕ ಬಿಟಿಎಂ ಲೇಔಟ್‌, ಮಡಿವಾಳ, ಎಚ್‌ಎಸ್‌ಆರ್ ಲೇಔಟ್‌ ಮತ್ತು ಬೊಮ್ಮನಹಳ್ಳಿ ಕಡೆಗೆ ಹೋಗುವ ಪ್ರಯಾಣಿಕರಿಗೆ ಅನುವು ಕಲ್ಪಿಸಿಕೊಡಬೇಕು’ ಎಂದು ಸಲಹೆ ನೀಡುತ್ತಾರೆ.

‘ಎರಡು ವರ್ಷಗಳ ಹಿಂದೆ  ಎಚ್‌ಎಸ್‌ಆರ್ ಲೇಔಟ್‌ ಒಂದನೇ ಸೆಕ್ಟರ್‌ ಬಳಿ ನನ್ನ ಸಹೋದರನಿಗೆ ಅಪಘಾತವಾಯಿತು. ಆಗ ದಟ್ಟಣೆಯಿಂದ ಆಂಬುಲೆನ್ಸ್ ಬರಲು ತಡವಾಯಿತು. ಇದೇ ರೀತಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಏನಾದರೂ ಮಾಡಬೇಕು ಎಂಬ ಯೋಚನೆ ಮೂಡಿತು. ಆಗ ಹೊಳೆದದ್ದು ಈ ಯೋಜನೆ’ ಎಂದು ವಿವರಿಸುತ್ತಾರೆ.

‘2014ರಲ್ಲಿ ಈ ಯೋಜನೆಯ ವಿನ್ಯಾಸವನ್ನು ನಾನು ಸಿದ್ಧಪಡಿಸಿದ್ದೆ. ಕ್ಯಾಲಿಫೋರ್ನಿಯಾದ ಸಾರಿಗೆ ತಜ್ಞರಿಗೆ ಅದಕ್ಕೆ ಅಂತಿಮ ಸ್ಪರ್ಶ ನೀಡಿದೆ. ವಾಹನಗಳ ಸುಗಮ ಸಂಚಾರ ಮತ್ತು ಸಿಗ್ನಲ್‌ ಮುಕ್ತ ವ್ಯವಸ್ಥೆ ರೂಪಿಸಲು ಈ ವಿನ್ಯಾಸ ಪೂರಕವಾಗಿದೆ’ ಎಂದು ಹೇಳುತ್ತಾರೆ. ‘ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಬಿಟಿಎಂ ಲೇಔಟ್‌, ಮಡಿವಾಳ, ಎಚ್‌ಎಸ್‌ಆರ್‌ ಲೇಔಟ್‌ ಮತ್ತು ಬೊಮ್ಮನಹಳ್ಳಿ – ಹೀಗೆ ನಾಲ್ಕೂ ದಿಕ್ಕಿನಲ್ಲಿ ವಾಹನಗಳು ಗಂಟೆಗೆ 60 ಕಿ.ಮೀ. ವೇಗದಲ್ಲಿ ಚಲಿಸುವಂತಹ ವ್ಯವಸ್ಥೆ ರೂಪಿಸಲು ಸಾಧ್ಯ’ ಎನ್ನುತ್ತಾರೆ ಸೈಯದ್‌.

ನಾನು ರೂಪಿಸಿದ ವಿನ್ಯಾಸವನ್ನು ಇ–ಮೇಲ್ ಮೂಲಕ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಬಿ.ಎನ್. ಮಂಜುನಾಥ್ ರೆಡ್ಡಿ ಅವರಿಗೆ ಕಳುಹಿಸಿರುವೆ. ಆದರೆ,  ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದರು.

ಸಂಚಾರ ದಟ್ಟಣೆ ತಗ್ಗಿಸಲು ಗ್ರೇಡ್ ಸಪರೇಟರ್ ನಿರ್ಮಾಣ ಉತ್ತಮ ಯೋಜನೆ. ಸಿಲ್ಕ್ ಬೋರ್ಡ್ ಜಂಕ್ಷನ್‌ ವರೆಗೆ ಮೆಟ್ರೊ ಮಾರ್ಗ ಬರಲಿದೆ. ಸದ್ಯ ಕಾಮಗಾರಿ ನಡೆಸಲು ಸಾಧ್ಯವಿಲ್ಲ
ರಾಮಲಿಂಗಾರೆಡ್ಡಿ,
ಸಾರಿಗೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.