ADVERTISEMENT

ಸೀಟ್ ಬೆಲ್ಟ್ ನಿಯಮ ಜಾರಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST
ಸೀಟ್ ಬೆಲ್ಟ್ ನಿಯಮ ಜಾರಿ
ಸೀಟ್ ಬೆಲ್ಟ್ ನಿಯಮ ಜಾರಿ   

ಬೆಂಗಳೂರು: ನಾಲ್ಕು ಚಕ್ರದ ವಾಹನಗಳ ಚಾಲಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವನ್ನು ನಗರ ಸಂಚಾರ ಪೊಲೀಸರು ಬುಧವಾರದಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ.

ಈ ನಿಯಮ ಉಲ್ಲಂಘಿಸುವ ಚಾಲಕರು ಮತ್ತು ಪ್ರಯಾಣಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನೂರು ರೂಪಾಯಿ ದಂಡ ಸಹ ವಿಧಿಸುತ್ತಿದ್ದಾರೆ. `ನಾಲ್ಕು ಚಕ್ರದ ವಾಹನಗಳ ಚಾಲಕರು ಮತ್ತು ವಾಹನದ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರು ಪ್ರಯಾಣದ ವೇಳೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಸಿಬ್ಬಂದಿ ಸ್ಥಳದಲ್ಲೇ ದೂರು ದಾಖಲಿಸಿ ನೂರು ರೂಪಾಯಿ ದಂಡ ವಿಧಿಸಲಿದ್ದಾರೆ~ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ ತಿಳಿಸಿದರು.

ಈ ನಿಯಮ ಪಾಲನೆಯ ಸಂಬಂಧ  ಚಾಲಕರಿಗೆ, ಪ್ರಯಾಣಿಕರಿಗೆ ಅರಿವು ಮೂಡಿಸಲು ನಗರದ ಹಲವು ಜಂಕ್ಷನ್‌ಗಳ ಹಾಗೂ ವೃತ್ತಗಳಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಸೀಟ್ ಬೆಲ್ಟ್ ಧರಿಸದೆ ಮೂರನೇ ಬಾರಿಗೆ ಸಿಕ್ಕಿ ಬೀಳುವ ಚಾಲಕರ ಚಾಲನಾ ಪರವಾನಗಿಯನ್ನು (ಡಿ.ಎಲ್) ರದ್ದುಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ಸೀಟ್ ಬೆಲ್ಟ್ ಧರಿಸದೆ ಪ್ರಯಾಣ ಮಾಡುವ ವೇಳೆ ಅಪಘಾತವಾದರೆ ಸಾವು ನೋವು ಸಂಭವಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ಚಾಲಕರು ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಈ ನಿಯಮ ಪಾಲಿಸುವ ಮೂಲಕ ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲೀಂ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.