ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ್ ಲೇಔಟ್‌ನಲ್ಲಿ ನೆಲಸಿದ್ದ ಉತ್ತರ ಪ್ರದೇಶದ ನಿವಾಸಿ ಅತುಲ್ ಸುಭಾಷ್(34) ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಅತುಲ್ ಸಂಬಂಧಿಕರಿಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಿದ್ದಾರೆ.
‘ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಕೃತಿಕ ಬುದ್ಧಿಮತ್ತೆ ವಿಭಾಗದಲ್ಲಿ ಅತುಲ್ ಸುಭಾಷ್ ಅವರು ಕೆಲಸ ಮಾಡುತ್ತಿದ್ದರು. ಮಂಜುನಾಥ ಲೇಔಟ್‌ನ ಮುನ್ನೆಕೊಳ್ಳಾಲದ ಡಾಲ್ಪೀನಿಯಂ ರೆಸಿಡೆನ್ಸಿಯ ಮೂರನೇ ಮಹಡಿಯ ಫ್ಯ್ಲ್ಯಾಟ್‌ನ ನಂ.: ಟಿ–06ನಲ್ಲಿ ನೆಲಸಿದ್ದ ಅವರು, ತಮ್ಮ ಫ್ಲ್ಯಾಟ್‌ನಲ್ಲಿ ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಮೃತ ಅತುಲ್ ಅವರ ಸಹೋದರ ಬಿಕಾಸ್‌ಕುಮಾರ್ ಅವರು, ‘ತನ್ನ ಸಹೋದರನ ಸಾವಿಗೆ ಆತನ ಪತ್ನಿ, ಪತ್ನಿಯ ತಾಯಿ, ಸಹೋದರ ಹಾಗೂ ಆಕೆಯ ಚಿಕ್ಕಪ್ಪ ಕಾರಣ’ ಎಂಬುದಾಗಿ ದೂರು ನೀಡಿದ್ದಾರೆ. ಅತುಲ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದದರು. ಅಲ್ಲದೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ₹3 ಕೋಟಿಗೆ ಬೇಡಿಕೆ ಇಟ್ಟಿದ್ದರು. ಇದರಿಂದ ಅತುಲ್ ಅವರು ಮಾನಸಿಕ ಹಾಗೂ ದೈಹಿಕವಾಗಿ ಮನನೊಂದಿದ್ದರು. ನಾಲ್ವರ ಪ್ರಚೋದನೆಯಿಂದಲೇ ಸಹೋದರ ಮೃತಪಟ್ಟಿದ್ದಾರೆಂದು ನೀಡಿದ ದೂರು ಆಧರಿಸಿ ಆರೋಪಿತರ ವಿರುದ್ಧ ಬಿಎನ್‌ಎಸ್ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಿಕಾಸ್‌ಕುಮಾರ್ ಅವರಿಂದ ಆರೋಪಿತರ ವಿಳಾಸ ಹಾಗೂ ಸಂಪರ್ಕ ಸಂಖ್ಯೆ ಪಡೆದುಕೊಳ್ಳಲಾಗಿದೆ. ಸಂಬಂಧಪಟ್ಟವರಿಗೆ ವಿಚಾರಣೆಗೆ ಬರುವಂತೆ ಸದ್ಯದಲ್ಲೇ ನೋಟಿಸ್ ಜಾರಿ ಮಾಡಲಾಗುವುದು’ ಎಂದು ತಿಳಿಸಿದರು.
‘ಅತುಲ್ ಸುಭಾಷ್ ಅವರು 26 ಪುಟಗಳ ಮರಣ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮರಣ ಪತ್ರವನ್ನೂ ಇ–ಮೇಲ್ ಮೂಲಕ ಸುಪ್ರೀಂ, ಹೈಕೋರ್ಟ್, ತಮ್ಮ ಕಚೇರಿ, ಸರ್ಕಾರೇತರ ಸಂಸ್ಥೆ, ಕುಟುಂಬ ಸದಸ್ಯರಿಗೆ ಕಳುಹಿಸಿದ್ದರು. ಅತುಲ್ ಅವರು ಐದು ವರ್ಷಗಳ ಹಿಂದೆ ವಿವಾಹ ಆಗಿದ್ದರು. ಆರಂಭದಲ್ಲಿ ಉತ್ತರ ಪ್ರದೇಶದಲ್ಲೇ ದಂಪತಿ ನೆಲಸಿದ್ದರು. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಇಬ್ಬರೂ ಬಂದಿದ್ದರು. ಈ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ಮಾಡಿಕೊಂಡು, ಪತ್ನಿ ಉತ್ತರ ಪ್ರದೇಶಕ್ಕೆ ವಾಪಸ್ ತೆರಳಿದ್ದರು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.