ADVERTISEMENT

ಸುದರ್ಶನ್‌ಗೆ ನಾಗರಿಕ ವಿಶೇಷ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಬೆಂಗಳೂರು: ‘ಸೋಲಿಗರ ಅಭಿವೃದ್ಧಿಗಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅವರ ಬದುಕನ್ನು ಹಸನುಗೊಳಿಸಲು ಡಾ. ಎಚ್.ಸುದರ್ಶನ್ ಸಾಕಷ್ಟು ಶ್ರಮಿಸುತ್ತಿದ್ದಾರೆ’ ಎಂದು ಬೆಂಗಳೂರು ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ವಿಜಯ ಕುಮಾರ್ ಶ್ಲಾಘಿಸಿದರು. ಬೆಂಗಳೂರು ರೋಟರಿ ಕ್ಲಬ್ ನಗರದ ರೋಟರಿ ಹೌಸ್ ಆಫ್ ಫ್ರೆಂಡ್‌ಶಿಪ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ನಾಗರಿಕ ವಿಶೇಷ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕರುಣಾ ಟ್ರಸ್ಟ್ ಮತ್ತು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸಂಸ್ಥಾಪಕ ಎಚ್.ಸುದರ್ಶನ್ ಅವರು 30 ವರ್ಷಗಳಿಂದ ಬಿಳಿಗಿರಿರಂಗನ ಬೆಟ್ಟದ ಸಮೀಪ ವಾಸಿಸುತ್ತಿರುವ ಸೋಲಿಗರು ಮತ್ತು ಆದಿವಾಸಿಗಳ ಜೀವನದ ಸುಧಾರಣೆಗೆ ನಿರಂತರವಾಗಿ ದುಡಿಯುತ್ತಿದ್ದು, ಅವರ ಹಕ್ಕು ಮತ್ತು ಕಲ್ಯಾಣಕ್ಕಾಗಿ ಹೋರಾಡುತ್ತಿದ್ದಾರೆ’ ಎಂದರು. ‘ಜೀವ ವೈವಿಧ್ಯ ಸಂರಕ್ಷಣೆಯ ಮೂಲಕ ಆದಿವಾಸಿ ಜನರ ಸುಸ್ಥಿರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಪ್ರೋತ್ಸಾಹ ನೀಡುತ್ತಿದ್ದಾರೆ. ಸುದರ್ಶನ್ ಅವರದ್ದು ಸ್ವಾರ್ಥ ರಹಿತ ಸೇವೆ. ಅವರ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ’ ಎಂದು ಹೇಳಿದರು.

‘ಸಮಾಜದ ನಿರ್ದಿಷ್ಟ ಸಮುದಾಯದ ಅಭಿವೃದ್ಧಿಗೆ ದುಡಿಯುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ, ವಿಶಿಷ್ಟ ನಾಗರಿಕ ಪ್ರಶಸ್ತಿಯನ್ನು ಬೆಂಗಳೂರು ರೋಟರಿ ಕ್ಲಬ್ ವತಿಯಿಂದ ನೀಡಲಾಗುತ್ತಿದೆ. ಅಂತೆಯೇ ಈಗಾಗಲೇ ಶಿಕ್ಷಣ, ಆರೋಗ್ಯ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ’ ಎಂದರು. ನಾಗರಿಕ ವಿಶೇಷ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುದರ್ಶನ್, ‘ಸೋಲಿಗರು ಮತ್ತು ಆದಿವಾಸಿಗಳಲ್ಲಿ ಅರಿವು ಮೂಡಿಸಲು ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಿಕೊಡಲು ಖಾಸಗಿ, ಸರ್ಕಾರದ ಸಹಭಾಗಿತ್ವದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದರು.

‘1981ರಲ್ಲಿ ಶಾಲೆ ಸ್ಥಾಪಿಸಿದಾಗ ಕೇವಲ 6 ವಿದ್ಯಾರ್ಥಿಗಳು ಸೇರ್ಪಡೆಯಾದರು. ಅವರಲ್ಲಿ ನಾಲ್ಕು ಮಂದಿ ಉನ್ನತ ಶಿಕ್ಷಣ ಪಡೆದು ಉತ್ತಮ ಕೆಲಸದಲ್ಲಿದ್ದಾರೆ. ಸೋಲಿಗರು ಮತ್ತು ಆದಿವಾಸಿಗಳ ಜೀವನ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ವಸತಿ ಸೌಕರ್ಯವನ್ನು ಕಲ್ಪಿಸುಕೊಡುವ ಅಗತ್ಯವಿದೆ’ ಎಂದರು. ಕ್ಲಬ್‌ನ ಅಧ್ಯಕ್ಷೆ ಡಾ. ಆಶಾ ಖತ್ರಿ, ಉಪಾಧ್ಯಕ್ಷ ವಿವೇಕ್ ಪ್ರಭು, ಕಾರ್ಯದರ್ಶಿ ಶೈಲೇಶ ರುದ್ರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.