ಬೆಂಗಳೂರು: `ಪ್ರಸ್ತುತ ದಿನಗಳಲ್ಲಿ ನಿಜವಾದ ಸುದ್ದಿಯ ಬಗ್ಗೆಯೇ ಜನರಲ್ಲಿ ಅನುಮಾನಗಳು ಹುಟ್ಟುತ್ತಿವೆ. ಸುದ್ದಿಯ ಮೌಲ್ಯ ಮಾಪನದಲ್ಲಿ ಖಾಸಗಿ ಸುದ್ದಿ ವಾಹಿನಿಗಳು ಸೋಲುತ್ತಿವೆ~ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಯುಎನ್‌ಐ ದಕ್ಷಿಣ ಪ್ರಾಂತ್ಯ ನೌಕರರ ಸಂಘಟನೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
`ಖಾಸಗಿ ಸುದ್ದಿ ವಾಹಿನಿಗಳು ಸುದ್ದಿಯ ವೈಭವೀಕರಣದಲ್ಲಿ ತೊಡಗಿರುವ ಸಂದರ್ಭದಲ್ಲಿ ಇಂದಿಗೂ ವಸ್ತುನಿಷ್ಠ ಸುದ್ದಿಯನ್ನು ನೀಡುತ್ತಾ ತನ್ನ ವೃತ್ತಿಪರತೆಯನ್ನು ಉಳಿಸಿಕೊಂಡಿರುವ ಹೆಗ್ಗಳಿಕೆ ಯುಎನ್‌ಐ ಸುದ್ದಿ ಸಂಸ್ಥೆಯದ್ದು~ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.
`ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಮಾಧ್ಯಮ ಕ್ಷೇತ್ರ ಏಕೀಕೃತವಾಗಬಾರದು ಎಂಬುದು ಜವಾಹರ್ ಲಾಲ್ ನೆಹರೂ ಅವರ ಕನಸಾಗಿತ್ತು. ಹೀಗಾಗಿ ಯುಎನ್‌ಐ ಸುದ್ದಿ ಸಂಸ್ಥೆಯ ಬೆಳವಣಿಗೆಗೆ ಅವರು ವಿಶೇಷ ಕಾಳಜಿ ವಹಿಸಿದ್ದರು~ ಎಂದು ಹೇಳಿದರು.
`ದೇಶದ ದೊಡ್ಡ ಸುದ್ದಿ ಸಂಸ್ಥೆಯಾದ ಯುಎನ್‌ಐ ಇಂದು ಸಣ್ಣ ಪ್ರಮಾಣ ಪ್ರಮಾಣದಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ಬೇಸರ ತಂದಿದೆ~ ಎಂದು ಅವರು ವಿಷಾದಿಸಿದರು.
`ದೇಶದ ಸಹಕಾರಿ ವ್ಯವಸ್ಥೆಗೆ ಇಂದಿನ ಮಾಧ್ಯಮಗಳು ಹೆಚ್ಚು ಒತ್ತು ನೀಡುತ್ತಿಲ್ಲ. ಸಹಕಾರ ತತ್ವ ನಮ್ಮ ದೇಶದ ಬೆನ್ನೆಲುಬು. ಮಾಧ್ಯಮಗಳು ಇಂದು ಈ ವಿಚಾರವನ್ನೇ ಕಡೆಗಣಿಸುತ್ತಿವೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ದೂರದರ್ಶನ ಕೇಂದ್ರದ ಉಪ ಪ್ರಧಾನ ನಿರ್ದೇಶಕ ಡಾ. ಮಹೇಶ್ ಜೋಶಿ, ಯುಎನ್‌ಐ ದಕ್ಷಿಣ ಪ್ರಾಂತ್ಯ ನೌಕರರ ಸಂಘಟನೆಯ ಅಧ್ಯಕ್ಷ ಎಂ.ಎಸ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.