ADVERTISEMENT

ಸುರಂಗ ಮಾರ್ಗಕ್ಕೆ ಟೆಂಡರ್‌

‘ನಮ್ಮ ಮೆಟ್ರೊ’ ನಾಗವಾರ– ಗೊಟ್ಟಿಗೆರೆ ಎರಡನೇ ಹಂತ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 20:17 IST
Last Updated 1 ಜುಲೈ 2017, 20:17 IST
ಸುರಂಗ ಮಾರ್ಗಕ್ಕೆ ಟೆಂಡರ್‌
ಸುರಂಗ ಮಾರ್ಗಕ್ಕೆ ಟೆಂಡರ್‌   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗಲಿರುವ ನಾಗವಾರ– ಗೊಟ್ಟಿಗೆರೆ ಮಾರ್ಗದ ಸುರಂಗ ಕಾಮಗಾರಿಗೆ  ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಟೆಂಡರ್‌ ಆಹ್ವಾನಿಸಿದೆ.

ನಾಗವಾರ ನಿಲ್ದಾಣದಿಂದ ಡೇರಿ ವೃತ್ತ ನಿಲ್ದಾಣದವರೆಗೆ ನಿರ್ಮಾಣವಾಗಲಿದೆ.  ಎರಡನೇ ಹಂತದಲ್ಲಿ ಈ ಸುರಂಗ ಮಾರ್ಗಕ್ಕೆ ಟೆಂಡರ್‌ ಕರೆಯುವುದು ಮಾತ್ರ ಬಾಕಿ ಇತ್ತು. ಈಗ  ಎರಡನೇ ಹಂತದ ಎಲ್ಲ ಮಾರ್ಗಗಳ ಟೆಂಡರ್‌ ಆಹ್ವಾನ ಪ್ರಕಿಯೆ ಪೂರ್ಣಗೊಂಡಿದೆ.

2020ರ ಒಳಗೆ ಎರಡನೇ ಹಂತದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿಗಮ ಉದ್ದೇಶಿಸಿದೆ. ಸುರಂಗ ಮಾರ್ಗವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಾಗಿದೆ. ಕಾಮಗಾರಿಗಳನ್ನೂ 36 ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಷರತ್ತು ವಿಧಿಸಲಾಗಿದೆ. 

ADVERTISEMENT

ಸುರಂಗ ಮಾರ್ಗದ ಕಾಮಗಾರಿಗೆ ಒಟ್ಟು ₹ 5047.56 ಕೋಟಿ ವೆಚ್ಚ ಆಗಲಿದೆ. ಇದಕ್ಕೆ ಯೂರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ₹ 3700 ಕೋಟಿ ಸಾಲ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ.

ಗೊಟ್ಟಿಗೆರೆ–ನಾಗಾವಾರ ಮಾರ್ಗದಲ್ಲಿ  (ರೀಚ್‌ 6) ನಿರ್ಮಾಣವಾಗುವ 7.5 ಕಿ.ಮೀ ಉದ್ದ ಎತ್ತರಿಸಿದ ಮಾರ್ಗದ (ಗೊಟ್ಟಿಗೆರೆ–  ಸ್ವಾಗರ ರಸ್ತೆ ಕ್ರಾಸ್‌ ) ₹ 575.52 ಕೋಟಿ ವೆಚ್ಚದ ಕಾಮಗಾರಿಗೆ ನಿಗಮವು ಮಾರ್ಚ್‌ ತಿಂಗಳಲ್ಲಿ ಟೆಂಡರ್‌ ಆಹ್ವಾನಿಸಿತ್ತು. ಎತ್ತರಿಸಿದ ಮಾರ್ಗದಲ್ಲಿ ಏಳು ನಿಲ್ದಾಣಗಳು ನಿರ್ಮಾಣವಾಗಲಿವೆ.

‘ಗೊಟ್ಟಿಗೆರೆ– ನಾಗವಾರ ಮಾರ್ಗಕ್ಕೆ ಅಂದಾಜು ₹ 11,000 ಕೋಟಿ ವೆಚ್ಚವಾಗಲಿದೆ. ಭೂಸ್ವಾಧೀನ, ಅಗತ್ಯ ಮೂಲಸೌಕರ್ಯಗಳ ಸ್ಥಳಾಂತರ ಹಾಗೂ ಕೊತ್ತನೂರಿನಲ್ಲಿ ಡಿಪೊ ನಿರ್ಮಾಣದ ವೆಚ್ಚವೂ ಇದರಲ್ಲಿ ಸೇರಿದೆ’ ಎಂದು ಪ್ರದೀಪ ಸಿಂಗ್‌ ಖರೋಲ ತಿಳಿಸಿದ್ದಾರೆ.

‘ಎರಡನೇ ಹಂತವನ್ನು 2020ರ ಒಳಗೆ  ಪೂರ್ಣಗೊಳಿಸುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಈ ಸಲುವಾಗಿಯೇ ಸುರಂಗ ಮಾರ್ಗವನ್ನು ನಾಲ್ಕು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿದ್ದೇವೆ. ಸುರಂಗ ಕೊರೆಯುವ 13 ಯಂತ್ರಗಳನ್ನು ಬಳಸುತ್ತೇವೆ. ಪ್ರತಿ ಪ್ಯಾಕೇಜ್‌ನಲ್ಲೂ ತಲಾ ಮೂರು ಸುರಂಗ ಕೊರೆಯುವ ಯಂತ್ರಗಳು ಬಳಕೆ ಆಗಲಿವೆ’ ಎಂದರು.

15 ನಿಮಿಷ ನಿಲ್ದಾಣದಲ್ಲೇ ನಿಂತ ಮೆಟ್ರೊ
ಬೆಂಗಳೂರು:
ವಿಶ್ವೇಶ್ವರಯ್ಯ ನಿಲ್ದಾಣದಲ್ಲಿ (ಸೆಂಟ್ರಲ್ ಕಾಲೇಜು) ಶನಿವಾರ ಮೆಟ್ರೊ ರೈಲಿನ ಬಾಗಿಲು ತೆರೆದುಕೊಳ್ಳದ ಕಾರಣ ನಮ್ಮ ಮೆಟ್ರೊ ಪೂರ್ವ ಪಶ್ಚಿಮ ಕಾರಿಡಾರ್‌ನಲ್ಲಿ 15 ನಿಮಿಷ ಮೆಟ್ರೊ ಸಂಚಾರ ಸ್ಥಗಿತಗೊಂಡಿತ್ತು.

‘ಸುರಂಗ ಮಾರ್ಗದ ನಿಲ್ದಾಣದಲ್ಲಿ ಮೆಟ್ರೊ ರೈಲು ಸುಮಾರು 15 ನಿಮಿಷ ನಿಂತಿತ್ತು. ಬಾಗಿಲು ಕೂಡ ತೆರೆದಿರಲಿಲ್ಲ. ಹಾಗಾಗಿ ಆತಂಕವಾಯಿತು’ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.