ADVERTISEMENT

ಸುಸಜ್ಜಿತ ವಸತಿ ಸಂಕೀರ್ಣ ನಿರ್ಮಾಣ : ಸಿಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:50 IST
Last Updated 19 ನವೆಂಬರ್ 2012, 19:50 IST
ಸುಸಜ್ಜಿತ ವಸತಿ ಸಂಕೀರ್ಣ ನಿರ್ಮಾಣ  : ಸಿಎಂ ಭರವಸೆ
ಸುಸಜ್ಜಿತ ವಸತಿ ಸಂಕೀರ್ಣ ನಿರ್ಮಾಣ : ಸಿಎಂ ಭರವಸೆ   

ಬೆಂಗಳೂರು: `ನರ್ಮ್ ಯೋಜನೆಯ ಸಹಯೋಗದೊಂದಿಗೆ ಮುಂದಿನ ವರ್ಷ ನೂರು ಕೊಳೆಗೇರಿ ಪ್ರದೇಶಗಳಲ್ಲಿ ಕೊಳೆಗೇರಿ ನಿವಾಸಿಗಳಿಗಾಗಿ ಸುಸಜ್ಜಿತ ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರಾಭಿವೃದ್ಧಿ ಯೋಜನೆಯಡಿ (ಜೆಎನ್ ನರ್ಮ್) ನಗರದ ಲಕ್ಷ್ಮಣರಾವ್ ನಗರ ಕೊಳೆಗೇರಿ ಪ್ರದೇಶದಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ನಗರದಲ್ಲಿ ಕೊಳೆಗೇರಿಗಳು ನಿರ್ಮಾಣವಾಗದಂತೆ ಗಮನ ಹರಿಸಬೇಕು. ಅವರಿಗಾಗಿ ಉತ್ತಮ ಬಡಾವಣೆಗಳನ್ನು  ನಿರ್ಮಿಸಬೇಕು.

ರಾಜಕೀಯೇತರವಾಗಿ ಎಲ್ಲರೂ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದಾಗ ಮಾತ್ರ ನಾಡು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.

`ಕೊಳೆಗೇರಿ ಪ್ರದೇಶಗಳಲ್ಲಿ ವಸತಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಶೇ 50 ಭಾಗ ಮತ್ತು ರಾಜ್ಯ ಸರ್ಕಾರವು ಶೇ 40 ಭಾಗವನ್ನು ನೀಡುತ್ತದೆ. ಅದರಲ್ಲಿ ಫಲಾನುಭವಿಗಳು ಶೇ 10 ಭಾಗವನ್ನು ನೀಡಬೇಕು.

ಆದರೆ, ಫಲಾನುಭವಿಗಳಿಗೆ ಹೊರೆಯಾಗುವುದಾದರೆ ಅದನ್ನು ಸರ್ಕಾರವೇ ಭರಿಸುವ ಬಗ್ಗೆ ಚರ್ಚೆ ನಡೆಸಲಾಗುವುದು~ ಎಂದು ಶಾಸಕ ಎನ್.ಎ. ಹ್ಯಾರೀಸ್ ಅವರ ಮನವಿಗೆ ಹೇಳಿದರು.

ರೂ 19.30ಕೋಟಿ ವೆಚ್ಚ 

ಲಕ್ಷ್ಮಣರಾವ್‌ನಗರ ಕೊಳಚೆ ಪ್ರದೇಶವು ಸುಮಾರು 30 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಈ ಪ್ರದೇಶದಲ್ಲಿ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರಾಭಿವೃದ್ಧಿ ಯೋಜನೆಯ  (ಜೆಎನ್ ನರ್ಮ್) ಹಂತ 1 ರ ಯೋಜನೆಯಡಿಯಲ್ಲಿ 920 ಕುಟುಂಬಗಳಿಗೆ ಮನೆಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ.

ಕಾಮಗಾರಿಗೆ ಒಟ್ಟು 19.30 ಕೋಟಿ  ರೂಪಾಯಿ ಅಂದಾಜು ವೆಚ್ಚವಾಗಿದ್ದು ಈಗ 630 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಜೆಎನ್ ನರ್ಮ್ ಹಂತ 2 ಮತ್ತು 3 ರ ಯೋಜನೆಯಡಿಯಲ್ಲಿ ಇನ್ನುಳಿದ 673 ಕುಟುಂಬಗಳಿಗೆ ಮನೆಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲು ರೂ 21.56 ಕೋಟಿ  ಅಂದಾಜು ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಂಡಿದ್ದು ಪ್ರಗತಿಯಲ್ಲಿದೆ.

ಸಂತಸವಾಗುತ್ತಿದೆ
`ಕೊಳೆಗೇರಿಯಲ್ಲಿ ನಮಗಾಗಿ ಈ ತರಹದ ಅಚ್ಚುಕಟ್ಟಾದ ಮನೆ ದೊರೆಯುತ್ತದೆಂದು ಎಣಿಸಿರಲಿಲ್ಲ. ಈಗ ನಮಗೆ ನಮ್ಮದೇ ಆದ ಸುಂದರವಾದ ಮನೆ ದೊರೆತಿದೆ. ಸಂತಸವಾಗುತ್ತಿದೆ. ನಮ್ಮನ್ನು ಕೊಳೆಗೇರಿಯವರೆಂದು ಹೀನವಾಗಿ ನೋಡದೆ ನಮ್ಮನ್ನು ಕೂಡ ಮನುಷ್ಯರಂತೆ ಕಾಣಬೇಕು~
-ಪಾರ್ವತಮ್ಮ, ಫಲಾನುಭವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.