ADVERTISEMENT

ಸುಸ್ಥಿರ ಕುಡಿಯುವ ನೀರಿನ ಯೋಜನೆ: ಮೂರು ಸಾವಿರ ಗ್ರಾಮಗಳಲ್ಲಿ ಜಾರಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: `ರಾಜ್ಯದ ಗ್ರಾಮಾಂತರ ಪ್ರದೇಶಗಳ ಕುಡಿಯುವ ನೀರಿನ ಗುಣಮಟ್ಟ ವೃದ್ಧಿಗಾಗಿ ಸುಸ್ಥಿರ ಕುಡಿಯುವ ನೀರಿನ ಯೋಜನೆಯನ್ನು ಮೂರು ಸಾವಿರ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ~ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ `ಸೆಂಟರ್ ಫಾರ್ ಸಸ್ಟೈನಬಲ್ ಡೆವಲೆಪ್ ಮೆಂಟ್~ ಆಯೋಜಿರುವ ಮೂರು ದಿನಗಳ `ಬೆಂಗಳೂರು ವಿಶ್ವ ಜಲ ಸಮಾವೇಶ~ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

`ರಾಜ್ಯದ ಹಲವು ಭಾಗಗಳಲ್ಲಿ ಬೋರ್‌ವೆಲ್‌ಗಳ ನೀರನ್ನೇ ಕುಡಿಯುವ ನೀರಿಗಾಗಿ ಅವಲಂಬಿಸಲಾಗಿದೆ. ಬಹುಪಾಲು ಕೊಳವೆಬಾವಿಗಳ ನೀರಿನಲ್ಲಿ ಕ್ಲೋರೈಡ್ ಪ್ರಮಾಣ ಅಧಿಕವಾಗಿದೆ. ಹೀಗಾಗಿ ಕುಡಿಯುವ ನೀರಿನ ಸುರಕ್ಷತೆಯ ದೃಷ್ಟಿಯಿಂದ ವಿವಿಧೋದ್ದೇಶ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಈಗಾಗಲೇ 100 ಗ್ರಾಮಗಳಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ~ ಎಂದು ಅವರು ತಿಳಿಸಿದರು.

ADVERTISEMENT

`ಸುರಕ್ಷಿತ ಕುಡಿಯುವ ನೀರು ಎಲ್ಲರಿಗೂ ದೊರೆಯಬೇಕು ಎನ್ನುವುದು ಸರ್ಕಾರದ ಉದ್ದೇಶ. ರಾಜ್ಯದಲ್ಲಿ ವಾರ್ಷಿಕ ಒಂದು ಸಾವಿರ ಕೋಟಿ ರೂ.ಗಳನ್ನು ಕುಡಿಯುವ ನೀರಿಗಾಗಿ ವ್ಯಯಿಸಲಾಗುತ್ತಿದೆ. ಆದರೂ ಸಂಪೂರ್ಣವಾಗಿ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುರಕ್ಷಿತ ಕುಡಿಯುವ ನೀರು ಪೂರೈಕೆಯ ಪೈಲಟ್ ಯೋಜನೆಯನ್ನು ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾ ಮತ್ತು ಬೆಳಗಾವಿ ನಗರಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು. ಈ ಮೂಲಕ 24 ಗಂಟೆಯೂ ಕುಡಿಯುವ ನೀರನ್ನು ಪೂರೈಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ದೇಶಕ್ಕೇ ಮಾದರಿಯಾಗುವಂತಹ ಕುಡಿಯುವ ನೀರು ಪೂರೈಕೆ ಕಾರ್ಯಕ್ರಮ~ ಎಂದರು.

ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಸುಧೀರ್ ಕೃಷ್ಣ ಮಾತನಾಡಿ, `ಎಲ್ಲಾ ನಗರಗಳಲ್ಲಿಯೂ ಕುಡಿಯುವ ನೀರನ್ನು ನಗರ ಪ್ರದೇಶದ ಹೊರಗಿನ ನೀರಿನ ಮೂಲಗಳಿಂದಲೇ ತರುವುದು ಅನಿವಾರ್ಯವಾಗಿದೆ. ಸಮರ್ಪಕ ಯೋಜನೆಗಳ ಮೂಲಕ ನೀರಿನ ಸರಿಯಾದ ಬಳಕೆ ಸಾಧ್ಯ. ಎಂದರು.

ನಗರಗಳಿಗೆ ಪೂರೈಕೆಯಾಗುವ ನೀರಿನಲ್ಲಿ ಶೇಕಡಾ 20 ರಿಂದ 30 ರಷ್ಟು ನೀರನ್ನು ಪುನರ್ಬಳಕೆ ಮಾಡಲು ಸಾಧ್ಯವಿದೆ. ಆದರೆ ಇದಕ್ಕೆ ತಕ್ಕಂಥಾ ಮಾನಸಿಕ ಸಿದ್ಧತೆಯ ಕೊರತೆ ನಮ್ಮಲ್ಲಿದೆ. ದೊಡ್ಡ ದೊಡ್ಡ ಯೋಜನೆಗಳನ್ನು ರೂಪಿಸುವಾಗ ಸ್ಥಳೀಯ ಆಡಳಿತದ ಪಾತ್ರವೂ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಹೊಸ ಆಲೋಚನೆಗಳಿಂದ ನೀರಿನ ಸುಸ್ಥಿರ ಬಳಕೆ ಸಾಧ್ಯ~ ಎಂದು ಅಭಿಪ್ರಾಯ ಪಟ್ಟರು.

ಅಂತರರಾಷ್ಟ್ರೀಯ ಜಲ ಸಂಘಟನೆಯ ಅಧ್ಯಕ್ಷ ಡಾ.ಎನ್. ಗ್ಲೆನ್ ಡೈಗರ್ ಮಾತನಾಡಿ, `ನೀರು ಪ್ರಕೃತಿಯ ಕೊಡುಗೆಯೇ ಆದರೂ ಅದರ ಪೂರೈಕೆ ಹಾಗೂ ಸಮರ್ಪಕ ನಿರ್ವಹಣೆಗೆ ಮನುಷ್ಯ ಅಲ್ಪ ಹಣವನ್ನು ವ್ಯಯಿಸುವುದು ಅನಿವಾರ್ಯವಾಗಿದೆ. ಸುಸ್ಥಿರ ಅಭಿವೃದ್ಧಿಯ ಇಂದಿನ ದಿನಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಜಲವೇ ಆಧಾರ. ಸುರಕ್ಷಿತ ಹಾಗೂ ಸುಸ್ಥಿರ ಕುಡಿಯುವ ನೀರಿನ ಲಭ್ಯತೆಗಾಗಿ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯವಾಗುತ್ತದೆ~ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಹಾಗೂ ಸೆಂಟರ್ ಫಾರ್ ಸಸ್ಟೈನಬಲ್ ಡೆವಲೆಪ್‌ಮೆಂಟ್ ಸಂಸ್ಥೆಯ ಅಧ್ಯಕ್ಷ ಡಾ.ಎ.ರವೀಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.