ADVERTISEMENT

ಸೇನಾ ಉನ್ನತ ಹುದ್ದೆಗಳಲ್ಲಿ ಕನ್ನಡಿಗರು ಕಡಿಮೆ- ವಿಷಾದ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 20:18 IST
Last Updated 7 ಏಪ್ರಿಲ್ 2013, 20:18 IST

ಬೆಂಗಳೂರು: `ಇಂಗ್ಲಿಷ್ ಭಾಷೆ ಹಾಗೂ ಸಂವಹನ ಕೌಶಲದ ಕೊರತೆಯಿಂದ ಕನ್ನಡಿಗರು ಭಾರತೀಯ ಸೇನೆಯ ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ' ಎಂದು ಭಾರತೀಯ ವಾಯು ಸೇನೆಯ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ವಿಷಾದಿಸಿದರು.

ಬೆಂಗಳೂರು ವಿಜ್ಞಾನ ವೇದಿಕೆಯು ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ `ಭಾರತೀಯ ವಾಯು ಸೇನೆಯಲ್ಲಿ ವೃತ್ತಿಯೊಂದಿಗಿನ ಸಾಹಸಗಳು' ವಿಷಯ ಕುರಿತು ಅವರು ಮಾತನಾಡಿದರು.

`ಭಾರತೀಯ ಸೇನೆಗೆ ಸೇರುವವರಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇದೆ. ಸೇನೆಗೆ ಸೇರುವುದೇ ಸಾಯುವುದಕ್ಕೆ ಎಂಬ ಮನೋಭಾವ ಇದಕ್ಕೆ ಕಾರಣ. ಅಲ್ಲದೇ ಕೌಶಲದ ಕೊರತೆಯಿಂದ ಕನ್ನಡಿಗರು ಸೇನೆಯ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುತ್ತಿಲ್ಲ. ಹೀಗಾಗಿ ಇರುವ ಕೊರತೆಗಳನ್ನು ನೀಗಿಸಿಕೊಂಡು ಸೇನೆಯ ಉನ್ನತ ಹುದ್ದೆಗಳಿಗೆ ಏರಲು ಕನ್ನಡಿಗರು ಪ್ರಯತ್ನಿಸಬೇಕು' ಎಂದು ಅವರು ಹೇಳಿದರು.

`ಸೇನೆಯಲ್ಲಿ ಹಲವಾರು ಉನ್ನತ ಹುದ್ದೆಗಳೂ ಇವೆ ಎಂಬುದನ್ನು ಜನ ಸಾಮಾನ್ಯರು ಮರೆತಿದ್ದಾರೆ. ಉತ್ತಮ ವಿದ್ಯಾಭ್ಯಾಸ ಹೊಂದಿ, ಕೌಶಲ ಉಳ್ಳವರು ಸೇನೆಯ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಲು ಅವಕಾಶವಿದೆ. ಅಲ್ಲದೇ ಸೇನೆಯಲ್ಲಿ ಕೆಲಸ ಮಾಡುವುದು ಹೆಮ್ಮೆಯ ಕೆಲಸ ಎಂಬುದನ್ನು ಮರೆಯಬಾರದು' ಎಂದರು.

`ಸೈನ್ಯಕ್ಕೆ ಸೇರುವುದು ಕೇವಲ ಸಂಬಳಕ್ಕಾಗಿ ಅಲ್ಲ ಎಂಬುದನ್ನು ಯುವ ಜನರು ಅರಿಯಬೇಕು. ಪ್ರತಿಯೊಬ್ಬರೂ ಮಾತೃಭೂಮಿಗಾಗಿ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಕುಟುಂಬವೊಂದರ ಒಬ್ಬ ಸದಸ್ಯ ಸೇನೆಗೆ ಸೇರುವ ನಿರ್ಧಾರ ಮಾಡಬೇಕು' ಎಂದು ಅವರು ನುಡಿದರು.

ಕಾರ್ಯಕ್ರಮದ ಕೊನೆಯಲ್ಲಿ `ಆಕಾಶ್ ಯೋಧ' ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.