ADVERTISEMENT

ಸೇವೆ ಕಾಯಂ: ಕಸವಿಲೇವಾರಿ ವಾಹನ ಚಾಲಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:50 IST
Last Updated 6 ಮಾರ್ಚ್ 2018, 19:50 IST
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಚಾಲಕರು ಮತ್ತು ಸಹಾಯಕರು ಘೇರಾವ್‌ ಹಾಕಿದರು –ಪ್ರಜಾವಾಣಿ ಚಿತ್ರ
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಚಾಲಕರು ಮತ್ತು ಸಹಾಯಕರು ಘೇರಾವ್‌ ಹಾಕಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪೌರಕಾರ್ಮಿಕರಂತೆ ತಮಗೂ ನೇರವಾಗಿ ಬಿಬಿಎಂಪಿಯಿಂದಲೇ ವೇತನ ಮತ್ತು ಇತರ ಸೌಲಭ್ಯ ನೀಡಬೇಕು. ಸೇವೆ ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿ ಕಸ ವಿಲೇವಾರಿಯ ಟಿಪ್ಪರ್‌, ಆಟೊ ಚಾಲಕರು ಮತ್ತು ಸಹಾಯಕರು ಮಂಗಳವಾರ ಪಾಲಿಕೆಯ ಎದುರು ಪ್ರತಿಭಟನೆ ನಡೆಸಿದರು.

‘ಗುತ್ತಿಗೆದಾರರ ಹಿಡಿತದಿಂದ ಪಾರು ಮಾಡಿ, ನಮ್ಮ ಸೇವೆ ಕಾಯಂಗೊಳಿಸಬೇಕು’ ಎಂದು ಪ್ರತಿಭಟನಾನಿರತರು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಮುತ್ತಿಗೆ ಹಾಕಿದ ಪ್ರಸಂಗವೂ ನಡೆಯಿತು. ಬೇಡಿಕೆ ಈಡೇರಿಸುವವರೆಗೂ ಜಾಗಬಿಟ್ಟು ಕದಲುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು.

ಚಾಲಕರು ಮತ್ತು ಸಹಾಯಕರು ಇಡೀ ದಿನ ನಡೆಸಿದ ಪ್ರತಿಭಟನೆ ಪಾಲಿಕೆ ಬಜೆಟ್‌ ಮೇಲಿನ ಚರ್ಚೆಯ ಸಭೆಯಲ್ಲೂ ಪ್ರತಿಧ್ವನಿಸಿತು. ಸದಸ್ಯ ಬಿಜೆಪಿಯ ಕಟ್ಟೆ ಸತ್ಯನಾರಾಯಣ ವಿಷಯ ಪ್ರಸ್ತಾಪಿಸಿ, ‘ಆಟೊ ಚಾಲಕರು ಮತ್ತು ಸಹಾಯಕರು ಪ್ರತಿಭಟನೆಗೆ ಇಳಿದಿರುವುದರಿಂದ ಅನೇಕ ವಾರ್ಡ್‍ಗಳಲ್ಲಿ ಕಸ ವಿಲೇವಾರಿ ಆಗಿಲ್ಲ. ತಕ್ಷಣ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಸಮಸ್ಯೆ ಉಲ್ಬಣವಾಗಲಿದೆ’ ಎಂದರು.

ADVERTISEMENT

ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಕಾಂಗ್ರೆಸ್‌ನ ಜಿ.ಪದ್ಮಾವತಿ, ‘ಹಲವು ವಾರ್ಡ್‌ಗಳಲ್ಲಿ ಬೆಳಿಗ್ಗೆಯಿಂದಲೇ ಕಸ ಸಾಗಣೆ ಸ್ಥಗಿತವಾಗಿದೆ. ರಾಶಿಗಟ್ಟಲೆ ಕಸ ಬಿದ್ದಿದೆ. ಕೂಡಲೇ ಆಟೊ ಚಾಲಕರು ಮತ್ತು ಸಹಾಯಕರ ಮನವೊಲಿಸಬೇಕು. ಇಲ್ಲದಿದ್ದರೆ, ಬುಧವಾರ ಮತ್ತಷ್ಟು ಸಮಸ್ಯೆ ಆಗುವ ಸಾಧ್ಯತೆ ಇದೆ’ ಸಭೆಯ ಗಮನ ಸೆಳೆದರು.

‌ಇದಕ್ಕೆ ಪ್ರತಿಕ್ರಿಯಿಸಿದ ಎನ್.ಮಂಜುನಾಥ ಪ್ರಸಾದ್, ‘ಕಸ ಸಾಗಣೆ ಮಾಡುವ ಆಟೊಗಳು ಮತ್ತು ಕಾಂಪ್ಯಾಕ್ಟರ್ಸ್‍ ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಆ ವಾಹನಗಳಿಗೆ ಚಾಲಕರು ಮತ್ತು ಸಹಾಯಕರನ್ನು ನೀಡುವ ಜವಾಬ್ದಾರಿಯೂ ಗುತ್ತಿಗೆದಾರರ ಜವಾಬ್ದಾರಿ. ಗುತ್ತಿಗೆದಾರರೇ ವೇತನ ಪಾವತಿಸುತ್ತಾರೆ. ಸರ್ಕಾರಿ ಆದೇಶವೂ ಹಾಗೆಯೇ ಇದೆ’ ಎಂದರು.

‘ಹೈದರಾಬಾದ್ ಮಾದರಿಯಲ್ಲಿ ಚಾಲಕರು, ಸಹಾಯಕರು ವಾರ್ಡ್‍ವಾರು ಸೊಸೈಟಿ ಮಾಡಿಕೊಂಡರೆ, ತಲಾ ವಾರ್ಡ್‍ಗೆ ಕನಿಷ್ಠ 50 ಆಟೊಗಳನ್ನು ತಯಾರಿಕ ಕಂಪನಿಗಳಿಂದಲೇ ನೇರವಾಗಿ ಖರೀದಿಸಿ ಕೊಡಲಾಗುವುದು ಅಥವಾ ಸಾಲ ಸೌಲಭ್ಯ ಒದಗಿಸಲಾಗುವುದು. ಪ್ರತಿ ತಿಂಗಳು ಪಾವತಿಸುವ ಬಾಡಿಗೆಯಲ್ಲಿ ಆ ಹಣವನ್ನು ಕಡಿತ ಮಾಡಿಕೊಳ್ಳಲಾಗುವುದು. ಈ ಆಯ್ಕೆ ಬಗ್ಗೆಯೂ ಚಾಲಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದರು.

ರಾಜ್ಯ ಸರ್ಕಾರ ಕಳೆದ ವರ್ಷ ಗುತ್ತಿಗೆ ಪೌರಕಾರ್ಮಿಕರನ್ನು ಕಸವಿಲೇವಾರಿ ಗುತ್ತಿಗೆದಾರರ ಹಿಡಿತದಿಂದ ಮುಕ್ತಗೊಳಿಸಿ, ವೇತನ ಹೆಚ್ಚಳ ಮಾಡಿತ್ತು. ಅಲ್ಲದೆ, ವೇತನವನ್ನು ಪೌರಕಾರ್ಮಿಕರ ಖಾತೆಗೆ ನೇರವಾಗಿ ಸಂದಾಯ ಮಾಡುವ  ತೀರ್ಮಾನ ತೆಗೆದುಕೊಂಡಿತ್ತು. ಪೌರಕಾರ್ಮಿಕರಿಗೆ ಇಎಸ್ಐ ಮತ್ತು ಪಿಎಫ್‌ ಸೌಲಭ್ಯ ಸಿಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.