ADVERTISEMENT

ಸೋಮವಾರದವರೆಗೂ`ಅನಲಾಗ್' ಪ್ರಸಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:28 IST
Last Updated 5 ಏಪ್ರಿಲ್ 2013, 19:28 IST

ಬೆಂಗಳೂರು:ಉಪಗ್ರಹ ವಾಹಿನಿಗಳ `ಅನಲಾಗ್' ಮಾದರಿಯ ಸಿಗ್ನಲ್ ಪ್ರಸಾರವನ್ನು ಇದೇ 8ರವರೆಗೆ (ಸೋಮವಾರ) ಸ್ಥಗಿತಗೊಳಿಸದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ಕರ್ನಾಟಕ ಕೇಬಲ್ ಆಪರೇಟರ್‌ಗಳ ಸಂಘ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಶುಕ್ರವಾರ ನಡೆಯಬೇಕಿತ್ತು. ಆದರೆ ಬೇರೆ ಪ್ರಕರಣಗಳ ವಿಚಾರಣೆ ನಂತರ, ದಿನದ ಕಲಾಪದ ಅಂತ್ಯದಲ್ಲಿ, ಸಂಘ ಸಲ್ಲಿಸಿದ ಅರ್ಜಿ ವಿಚಾರಣೆಗೆ ಬಂತು.

ಕೇಬಲ್ ಸಂಪರ್ಕ ಪಡೆದುಕೊಂಡವರು ಮಾರ್ಚ್ 31ರ ನಂತರ ಚಾನೆಲ್‌ಗಳನ್ನು ವೀಕ್ಷಿಸಲು ಸೆಟ್‌ಟಾಪ್ ಬಾಕ್ಸ್ ಖರೀದಿಸಬೇಕು, ಅನಲಾಗ್ ಮಾದರಿಯ ಸಿಗ್ನಲ್ ಪ್ರಸಾರ ನಿಲ್ಲಿಸಿ, ಡಿಜಿಟಲ್ ಮಾದರಿಯ ಸಿಗ್ನಲ್ ಮಾತ್ರ ಪ್ರಸಾರ ಮಾಡಬೇಕು ಎಂದು ಕೇಂದ್ರ ಸರ್ಕಾರ ನಿಯಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಸೆಟ್‌ಟಾಪ್ ಬಾಕ್ಸ್ ಅಳವಡಿಕೆಗೆ ಹೆಚ್ಚಿನ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ.

ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್, ಅಲ್ಲಿಯವರೆಗೆ ಸಿಗ್ನಲ್ ಸ್ಥಗಿತಗೊಳಿಸಬಾರದು ಎಂದು ನಿರ್ದೇಶನ ನೀಡಿದರು.

ಕೆಜೆಪಿ ವಿವಾದ- ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಂದು ಕೇಂದ್ರ ಚುನಾವಣಾ ಆಯೋಗ ನೀಡಿರುವ ಆದೇಶ ರದ್ದು ಕೋರಿ ಪದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

`ಅರ್ಜಿ ಕುರಿತು ನ್ಯಾಯಾಲಯ ಅಂತಿಮ ಆದೇಶ ನೀಡುವವರೆಗೆ, ಕೆಜೆಪಿ ಅಭ್ಯರ್ಥಿಗಳಿಗೆ ಬಿ ಫಾರಂ ನೀಡದಂತೆ ತಡೆಯಾಜ್ಞೆ ನೀಡಬೇಕು' ಎಂದು ಕೋರಿ ಪದ್ಮನಾಭ ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ನಡೆಸಿದರು.


ಕೇಂದ್ರ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲ ಕೃಷ್ಣ ದೀಕ್ಷಿತ್, `ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ವಿವಾದಗಳಲ್ಲಿ, ಚುನಾವಣಾ ಆಯೋಗ ನೀಡುವ ಆದೇಶ ಅಂತಿಮ. ಕೆಜೆಪಿ ಅಧ್ಯಕ್ಷ ಯಾರು ಎಂಬ ಪ್ರಶ್ನೆಗೂ, ಆಯೋಗ ನೀಡಿರುವ ಆದೇಶವೇ (ಯಡಿಯೂರಪ್ಪ ಅವರೇ ಕೆಜೆಪಿ ಅಧ್ಯಕ್ಷ ಎಂದು) ಉತ್ತರವಾಗುತ್ತದೆ' ಎಂಬ ಹೇಳಿಕೆ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.